ತೆಲಂಗಾಣದಲ್ಲಿ ಕರ್ನಾಟಕದ ಫಲಿತಾಂಶ ಮರುಕಳಿಸಲಿದೆ: ಸಚಿವ ಝಮೀರ್ ಅಹ್ಮದ್ ಖಾನ್ ವಿಶ್ವಾಸ

Update: 2023-11-11 17:03 GMT

ಹೈದರಾಬಾದ್, ನ.11: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶವೆ ಮರುಕಳಿಸಲಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಹೈದರಾಬಾದ್‍ನ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹತ್ತು ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸರಗೊಂಡಿದ್ದು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕರ್ನಾಟಕದ ಮಾದರಿಯಲ್ಲೆ ಇಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ತೆಲಂಗಾಣದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಜಾತ್ಯತೀತ ಮನೋಭಾವದ ಎಲ್ಲ ವರ್ಗ ಕಾಂಗ್ರೆಸ್ ಪರ ವಿಶ್ವಾಸ ಹೊಂದಿದೆ. ಕೆಸಿಆರ್ ಕೊಟ್ಟ ಭರವಸೆ ಈಡೇರಿಸಿಲ್ಲ, ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಕರ್ನಾಟಕದಲ್ಲಿ ನಾವು ಕೊಟ್ಟ ಗ್ಯಾರಂಟಿ ಈಡೇರಿಸಿದ್ದೇವೆ. ಕೋಟ್ಯಂತರ ಕುಟುಂಬಗಳಿಗೆ ನಮ್ಮ ಗ್ಯಾರಂಟಿ ಯೋಜನೆಯ ಫಲ ದೊರಕುತ್ತಿದೆ. ತೆಲಂಗಾಣದಲ್ಲೂ ನಾವು ಆರು ಗ್ಯಾರಂಟಿ ನೀಡಿದ್ದು ಅದನ್ನು ಜಾರಿ ಮಾಡಿಯೆ ತೀರುತ್ತೇವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಸಮುದಾಯಕ್ಕೆ ಕೊಟ್ಟ ಮಾತು ಉಳಿಸಿಕೊಂಡಿದೆ. ಸ್ಪೀಕರ್, ಎರಡು ಸಚಿವ ಸ್ಥಾನ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ, ವಿಧಾನಪರಿಷತ್ ಮುಖ್ಯ ಸಚೇತಕ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಇದು ಕಾಂಗ್ರೆಸ್ ನ ಬದ್ಧತೆ ಆಗಿದ್ದು ತೆಲಂಗಾಣದಲ್ಲೂ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಹೆಚ್ಚು ಆದ್ಯತೆ ಸಿಗಲಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೆ.ಸಿ.ಆರ್ ಐದು ವರ್ಷ ತೋಟದ ಮನೆಯಲ್ಲಿದ್ದು ಇದೀಗ ಚುನಾವಣೆ ಬಂತು ಎಂದು ಹೊರಗೆ ಬಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ್ದ ಶೇ.22 ರಷ್ಟು ಮೀಸಲಾತಿ ವಾಗ್ದಾನ ಈಡೇರಿಸಿಲ್ಲ. ಶೇ.16 ರಿಂದ 17 ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಕೇವಲ 2200 ಕೋಟಿ ರೂ. ಅನುದಾನ ಘೋಷಿಸಿ 800 ರಿಂದ 1000 ಕೋಟಿ ರೂ.ಮಾತ್ರ ಬಿಡುಗಡೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಬಗ್ಗೆ ಅವರಿಗೆ ಇರುವ ಕಾಳಜಿ ಎಂದು ಅವರು ಲೇವಡಿ ಮಾಡಿದರು.

ನಮ್ಮ ಸರಕಾರ ಬಂದರೆ ಐದು ಸಾವಿರ ಕೋಟಿ ರೂ.ಅನುದಾನ, ಬಡ ಮುಸ್ಲಿಂ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ.ನೆರವು, ಉನ್ನತ ವ್ಯಾಸಂಗ ಮಾಡುವ ಸಮುದಾಯದ ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ.ವಿದ್ಯಾರ್ಥಿ ವೇತನ, ಇಮಾಮ್, ಮುಅದ್ದೀನ್‍ರಿಗೆ ಮಾಸಿಕ 12 ಸಾವಿರ ರೂ.ಗೌರವ ಧನ, 2004 ರಿಂದ ಖಾಲಿ ಉಳಿದಿರುವ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇವೆ ಅದರಂತೆ ನಡೆಯುತ್ತೇವೆ ಎಂದು ಅವರು ಹೇಳಿದರು.

ಕೆ.ಸಿ.ಆರ್ ಅವರು ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣಕ್ಕಾಗಿ ಹತ್ತು ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಶ್ವೇತ ಪತ್ರ ಹೊರಡಿಸಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದೆ. ಅದೇ ರೀತಿ ತೆಲಂಗಾಣದಲ್ಲೂ ಕಾರ್ಯಕ್ರಮ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಝಮೀರ್ ಅಹ್ಮದ್ ಹೇಳಿದರು.

ತೆಲಂಗಾಣದಲ್ಲಿ ಬಿಆರ್‍ಎಸ್, ಬಿಜೆಪಿ, ಎಂಐಎಂ ಎಲ್ಲವೂ ಒಂದೇ. ಕಾಂಗ್ರೆಸ್ ಮಾತ್ರ ಅಪ್ಪಟ ಜಾತ್ಯತೀತವಾದಿ ಪಕ್ಷ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಎಐಸಿಸಿ ತೆಲಂಗಾಣ ಉಸ್ತುವಾರಿ ಅಜಯ್ ಕುಮಾರ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮಾಧ್ಯಮ ಘಟಕದ ಕಮಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News