ಕೆಎಎಸ್ ಪರೀಕ್ಷೆಯ ಕೀ ಉತ್ತರ ಪ್ರಕಟ : ಆಕ್ಷೇಪಣೆ ಸಲ್ಲಿಸಲು ಸೆ.4 ಕೊನೆಯ ದಿನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ಆ.27ರಂದು ನಡೆಸಿದ 2023-24ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ(ಕೆಎಎಸ್) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಜಾಲತಾಣ http://kpsc.kar.nic.in ನಲ್ಲಿ ಪ್ರಕಟಿಸಲಾಗಿದೆ.
ಒಟ್ಟು 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಉತ್ತರಗಳನ್ನು ಪ್ರಕಟಿಸಿದೆ. ಅಭ್ಯಥಿಗಳು ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸೆ.4 ರ ಸಂಜೆ 5.30 ಗಂಟೆಯೊಳಗೆ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು - 560 001 ಇವರಿಗೆ ಮಾತ್ರ ತಲುಪುವಂತೆ ಕಳುಹಿಸಬಹುದು.
ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚನೆಗಳನ್ನು ಹಾಗೂ ನಮೂನೆಯ ಮಾದರಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಅವಧಿಯ ನಂತರ ಸ್ವೀಕರಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಆಯೋಗವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.