ಕೆಎಸ್ಸಾರ್ಟಿಸಿ 62ನೆ ಸಂಸ್ಥಾಪನಾ ದಿನಾಚಾರಣೆ: ಸಚಿವರಿಂದ ಅಪಘಾತ, ಅಪರಾಧ ರಹಿತ ಸೇವೆ ಸಲ್ಲಿಸಿದ 38 ಚಾಲಕರಿಗೆ ಬೆಳ್ಳಿ ಪದಕ ಪ್ರದಾನ

Update: 2023-08-01 16:14 GMT

ಬೆಂಗಳೂರು, ಆ.1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 62ನೆ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ಮಂಗಳವಾರ ನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯ ಆವರಣದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಅಪಘಾತ ಪರಿಹಾರ ನಿಧಿ ಯೋಜನೆಯಡಿ ಅಪಘಾತ ತಡೆಗಟ್ಟಲು, ತ್ವರಿತಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಅಗತ್ಯತೆಗೆ ಅನುಗುಣವಾಗಿ ಆಸ್ಪತ್ರೆಗೆ, ಇತ್ಯಾದಿ ಸ್ಥಳಗಳಿಗೆ ತೆರಳಲು ಪ್ರಯಾಣಿಕರ ಸೇವೆಯ ಹಿತದೃಷ್ಟಿಯಿಂದ 20 ನೂತನ ಬೊಲೆರೋ ವಾಹನಗಳನ್ನು ಸೇರ್ಪಡೆ ಮಾಡಲಾಯಿತು.

ನಿಗಮವು ಪ್ರತಿ ಮೂರು ತಿಂಗಳಿಗೊಮ್ಮೆ ನಿಗಮದ ಚಟುವಟಿಕೆಗಳ ಕುರಿತು ಆಂತರಿಕ ನಿಯತಕಾಲಿಕ ಸಾರಿಗೆ ಸಂಪದವನ್ನು ಬಿಡುಗಡೆ ಮಾಡುತ್ತದೆ. ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಜಾರಿಯಾಗಿದ್ದು, ಯೋಜನೆಯ ಕುರಿತು ಹಿರಿಯ ಲೇಖಕರು ಬರೆದಿರುವ ವಿಶಿಷ್ಠ ಲೇಖನಗಳು, ಶಕ್ತಿ ಯೋಜನೆಯ ಪರಿಣಾಮ, ಶಕ್ತಿ ಯೋಜನೆಯ ಅನುಕೂಲತೆ ಬಗ್ಗೆ ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯ, ಕವನಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿಶೇಷ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 14 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪಕ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಲ್ಲಿ 10 ಅವಲಂಬಿತರನ್ನು ತಾಂತ್ರಿಕ ಹುದ್ದೆಗಳಲ್ಲಿ ಮತ್ತು 4 ಅವಲಂಬಿತರನ್ನು ಚಾಲಕ-ನಿರ್ವಾಹಕ ಹುದ್ದೆಯಲ್ಲಿ ನೇಮಕ ಮಾಡಿಕೊಂಡು ನೇಮಕಾತಿ ಆದೇಶವನ್ನು ನೀಡಲಾಯಿತು.

ವಾಹನಗಳ ಪುನಶ್ಚೇತನ ಕಾರ್ಯದಲ್ಲಿನ ಸಾಧನೆಗಾಗಿ ಬೆಂಗಳೂರಿನ ಪ್ರಾದೇಶಿಕ ಕಾರ್ಯಾಗಾರ, ಹಾಸನ, ವಿಭಾಗಗಳು ಹಾಗೂ ಅಧಿಕಾರಿಗಳಿಗೆ ಪುರಸ್ಕಾರ ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ನಿಗಮದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ಕೈಗಾರಿಕಾ ತರಬೇತಿ, ಪದವಿ(ಬಿಇ, ಬಿಎಸ್ಸಿ) ಹಾಗೂ ಸ್ನಾತಕ್ಕೋತರ ಪದವಿಗಳ ವ್ಯಾಸಂಗಕ್ಕಾಗಿ ಮಾತ್ರ ಸ್ಕಾಲರ್ ಶಿಪ್ ನೀಡುತ್ತಿದ್ದು, ಈಗ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚಿನ ವಿಧ್ಯಾಬ್ಯಾಸಗಳನ್ನು ಸ್ಕಾಲರ್ ಶಿಪ್ ವ್ಯಾಪ್ತಿಗೆ ಸೇರಿಸಿ ನೂತನ ಸಾರಿಗೆ ವಿದ್ಯಾ ಚೇತನ ಯೋಜನೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಐದು ವರ್ಷಗಳ ಕಾಲ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ 38 ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಹಾಗೂ 2 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪದಕ ವಿಜೇತ ಚಾಲಕರಿಗೆ ಮಾಸಿಕ 250 ರೂ. ಭತ್ಯೆ ನೀಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News