ಮೂಲ ಸೌಕರ್ಯ ಕೊರತೆ: ಮೇಲ್ದರ್ಜೆಗೇರಿಸಲು ಕೋರಿದ ಶಾಲೆಗಳ ವಿರುದ್ಧ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಅ.6: ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸದೇ, ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ನಿರ್ದೇಶನ ನೀಡುವಂತೆ ಕೋರಿದ್ದ ಎರಡು ಖಾಸಗಿ ಶಾಲೆಗಳ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಖಾಸಗಿ ಶಾಲೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೆ ಶಾಲೆ ನಡೆಸಿ, ಅಪ್ರಾಪ್ತ ಮಕ್ಕಳ ಜೀವದ ಜತೆಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.
ಮೂಲ ಸೌಕರ್ಯಗಳಿಲ್ಲದ ಕಾರಣ ಮೇಲ್ದರ್ಜೆಗೇರಿಸಲು ಸರಕಾರ ಅನುಮತಿ ನೀಡಿಲ್ಲ. ಹೀಗಾಗಿ, ಸರಕಾರಿ ಪ್ರಾಧಿಕಾರಗಳ ಕ್ರಮ ದುರುದ್ದೇಶಪೂರಿತವಾಗಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿದೆ.
ಶಾಲಾ ಕಟ್ಟಡ ಇದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಕ್ರೀಡಾ ಮೈದಾನ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ತಡೆಗೋಡೆ ಇಲ್ಲ. ಅಲ್ಲದೆ, ಅಗ್ನಿ ಸುರಕ್ಷತೆ ಕ್ರಮಗಳನ್ನು ಅಳವಡಿಸಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ನಡೆಸಲು ಅಥವಾ ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಹೇಗೆ ಸಾಧ್ಯ ಎಂದು ಅರ್ಜಿದಾರ ಶಾಲೆಗಳ ವಿರುದ್ಧ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.