ಭಾರತದ ಪ್ರಪ್ರಥಮ ಮರುಬಳಕೆ ಉಡ್ಡಯನ ವಾಹನ ʼಪುಷ್ಪಕ್ʼ ಲ್ಯಾಂಡಿಂಗ್‌ ಪರೀಕ್ಷೆ ಯಶಸ್ವಿ

Update: 2024-03-22 06:21 GMT

ಪುಷ್ಪಕ್ | Photo: X \ @isro

ಚಿತ್ರದುರ್ಗ: ಮರುಬಳಕೆಯ ಉಡ್ಡಯನ ವಾಹನ ʼಪುಷ್ಪಕ್ʼ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಬಾಹ್ಯಾಕಾಶ ಪರೀಕ್ಷಾ ವಲಯದಲ್ಲಿ ಶುಕ್ರವಾರ ಯಶಸ್ವಿಯಾಗಿ ಭೂಸ್ಪರ್ಶ ಮಾಡಿಸಿದೆ. ಉಡಾವಣಾ ಪ್ರದೇಶದ ಬಳಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, “ಇಸ್ರೋ ಮತ್ತೆ ಸಾಧನೆ ಮಾಡಿದೆ! ನಾಮ ಮಾತ್ರದ ಎತ್ತರದಿಂದ ಬಿಡುಗಡೆ ಮಾಡಲಾದ ರೆಕ್ಕೆ ಸಹಿತ ಪುಷ್ಪಕ್ ವಾಹನವು, ರನ್ ವೇ ಮೇಲೆ ನಿಖರವಾಗಿ ಮತ್ತು ಸ್ವಯಂಚಾಲಿತವಾಗಿ ಭೂಸ್ಪರ್ಶ ಮಾಡಿದೆ” ಎಂದು ಪ್ರಕಟಿಸಿದೆ.

“ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಪುಷ್ಪಕ್ ಅನ್ನು ಹೊತ್ತುಕೊಂಡು ಹೋಗಿ ರನ್ ವೇಯಿಂದ 4.5 ಕಿಮೀ ಎತ್ತರದಲ್ಲಿ ಬಿಡುಗಡೆ ಮಾಡಿತು. ರನ್ ವೇಯಿಂದ 4 ಕಿಮೀ ಎತ್ತರದಲ್ಲಿ ಬಿಡುಗಡೆ ಮಾಡಿದ ನಂತರ, ಪುಷ್ಪಕ್ ವಾಹನವು ತಿರುವುಗಳನ್ನು ಸರಿಪಡಿಸಿಕೊಂಡು ಸ್ವಯಂಚಾಲಿತವಾಗಿ ರನ್ ವೇಯನ್ನು ಭೂಸ್ಪರ್ಶ ಮಾಡಿತು. ರನ್ ವೇ ಮೇಲೆ ನಿಖರವಾಗಿ ಭೂಸ್ಪರ್ಶ ಮಾಡಿದ ಪುಷ್ಪಕ್ ವಾಹನವು, ತನ್ನ ಬ್ರೇಕ್ ಪ್ಯಾರಾಶೂಟ್, ಭೂಸ್ಪರ್ಶ ಗೇರ್ ಬ್ರೇಕ್ ಗಳು ಹಾಗೂ ನೋಸ್ ವ್ಹೀಲ್ ಸ್ಟಿಯರಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ನಿಲುಗಡೆಯಾಯಿತು” ಎಂದು ಇಸ್ರೊ ಹೇಳಿದೆ.

ಪುಷ್ಪಕ್ ಮರುಬಳಕೆ ಉಡ್ಡಯನ ವಾಹನವನ್ನು ಸರ್ವ ರಾಕೆಟ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಕಕ್ಷೆಗೆ ಒಂದೇ ಹಂತದಲ್ಲಿ ತಲುಪುವ ಮರುಬಳಕೆಯ ವಾಹನವನ್ನಾಗಿ ರೂಪಿಸಲಾಗಿದೆ. ಈ ವಾಹನವು ಎಕ್ಸ್-33 ಸುಧಾರಿತ ತಂತ್ರಜ್ಞಾನ ಪ್ರದರ್ಶಕ, ಎಕ್ಸ್-34 ಪರೀಕ್ಷಾ ಆಸನ ತಂತ್ರಜ್ಞಾನ ಪ್ರದರ್ಶಕ ಹಾಗೂ ಮೇಲ್ದರ್ಜೆಗೇರಿಸಲಾಗಿರುವ ಡಿಸಿ-ಎಕ್ಸ್ಎ ವಿಮಾನ ಪ್ರದರ್ಶಕಗಳಂತಹ ಹಲವಾರು ಪ್ರಮುಖ ಸಾಧನಗಳನ್ನು ಹೊಂದಿದೆ.

ಈ ಉಡಾವಣೆಯು ಪುಷ್ಪಕ್ ವಾಹನದ ಮೂರನೆ ಪರೀಕ್ಷಾರ್ಥ ಉಡಾವಣೆಯಾಗಿದ್ದು, ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲೂ ಅದರ ಸ್ವಯಂಚಾಲಿತ ಭೂಸ್ಪರ್ಶ ಸಾಮರ್ಥ್ಯವನ್ನು ನಿಖರಗೊಳಿಸಲು ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News