ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ; ಮೈಸೂರಿನಲ್ಲಿ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮೈಸೂರು,ಆ.20: ರಾಜ್ಯ ಸರಕಾರದ ಐದು ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮೈಸೂರಿನಲ್ಲಿ ಚಾಲನೆ ನೀಡಲಾಗುತಿದ್ದು, ರಾಜ್ಯದ 1ಕೋಟಿ 10ಲಕ್ಷ ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸಚಿವರು ಆಗಸ್ಟ್ 30 ರಂದು ಕಾರ್ಯಕ್ರಮ ನಡೆಯಲಿರುವ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿದರು.
ಇದಕ್ಕೂ ಮುನ್ನ ನಗರದ ಜಿ.ಪಂ. ನ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ರವಿವಾರ ನಡೆದ ಮೈಸೂರು, ಮಂಡ್ಯ,ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳ ಹಾಗೂ ಜಿ.ಪಂ.ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,ಸಂಪುಟದ ಸದಸ್ಯರು ಹಾಗೂ ದೆಹಲಿಯಿಂದ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸುತ್ತಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು.
ಸುಮಾರು 1.5 ಲಕ್ಷ ಮಹಿಳೆಯರು ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗಿಯಾಗುವುದರೊಂದಿಗೆ ಐತಿಹಾಸಿಕ ಕಾರ್ಯಕ್ರಮ ಆಗುವುದರೊಂದಿಗೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.
ಈಗಾಗಲೇ ಶೇ.80 ರಷ್ಟು ನೋಂದಣಿ ಪ್ರಕ್ರಿಯೆ ಮುಗಿದಿದ್ದು,ನೋಂಣಿಗೆ ಸಮಯ ನಿಗದಿ ಮಾಡಿರುವುದಿಲ್ಲ ನೋಂದಣಿ ನಿರಂತರವಾಗಿರುತ್ತದೆ ಎಂದರು.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ,ರಾಜ್ಯದ 1.30 ಲಕ್ಷ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಯೋಜನೆಯಾಗಿದ್ದು, ಸ್ವಾತಂತ್ರ್ಯಾನಂತರದ ಬಹುದೊಡ್ಡ ಯೋಜನೆ ಇದಾಗಿದೆ. ಮಹಿಳಾ ಸಶಸ್ತೀಕರಣದೊಂದಿಗೆ ಮಹಿಳೆಯರ ಆತ್ಮಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದು ಅವರಿಗೆ ಸರಿಯಾದ ಊಟ,ಶೌಚಾಲಯ, ಬಸ್ ವ್ಯವಸ್ಥೆ, ಕುಡಿಯುವ ನೀರು ಸಮರ್ಪಕವಾಗಿರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ರಾದ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ,ರವಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಅರ್ಚನ,ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.,ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.