ಡ್ರಗ್ಸ್ ದಂಧೆಕೋರರ ಆಸ್ತಿ ಜಪ್ತಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2024-02-09 13:43 GMT

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ದಾಬಸ್‍ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್‍ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಡಿ 'ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಂಜಾಬ್‍ನಲ್ಲಿ ಪ್ರತಿಯೊಬ್ಬ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ. ಮಾದಕವಸ್ತು ಬೆರೆಸಿದ ಚಾಕೋಲೆಟ್ ಮಾರುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ವ್ಯಸನಕ್ಕೆ ಅಂಟಿಸುವುದು ದಂಧೆಕೋರರ ಉದ್ದೇಶವಿರಬಹುದು. ಇದಕ್ಕೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಲು ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.

ಡ್ರಗ್ಸ್ ದಂಧೆ ವಿಶ್ವದ ಜನ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುತ್ತಿದೆ. ವಿಶೇಷವಾಗಿ ಯುವಕರ ಜೀವನ ಹಾಳು ಮಾಡುತ್ತಿವೆ. ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳಷ್ಟು ದೊಡ್ಡ ಸವಾಲಾಗಿ ನಿಂತಿದೆ ಎಂದು ಹೇಳಿದರು.

ವಿಶ್ವಕ್ಕೆ ಸವಾಲಾಗಿರುವ ಡ್ರಗ್ಸ್ ದಂಧೆಯನ್ನು ಎದುರಿಸುವಲ್ಲಿ ಕೆಲ ಸಣ್ಣ ರಾಷ್ಟ್ರಗಳು ಸೋತು ಕೈಚೆಲ್ಲಿ ನಿಂತಿವೆ. ಹಾಲೆಂಡ್, ಸ್ವಿಟ್ಜಲೆರ್ಂಡ್ ಸೇರಿದಂತೆ ಇನ್ನೂ, ಕೆಲ ದೇಶಗಳು ಏನಾದರಾಗಲಿ ಎಂಬಂತೆ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದನ್ನು ನಿಲ್ಲಿಸಿ, ಸೋಲನ್ನು ಒಪ್ಪಿಕೊಂಡಿವೆ. ಇಂತಹ ದುಸ್ಥಿತಿ ನಮ್ಮ ದೇಶಕ್ಕೆ ಬರಬಾರದು. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.

ಈ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕೇಂದ್ರ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, ಎಡಿಜಿಪಿ ಉಮೇಶ್, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ, ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್, ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಕೇಂದ್ರ-ದಕ್ಷಿಣ ವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News