ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಲಿ: ಮುಖ್ಯಮಂತ್ರಿ ಚಂದ್ರು ಆಗ್ರಹ

Update: 2023-10-14 13:59 GMT

ರಾಯಚೂರು, ಅ.14: ಇಡಿ ರಾಜ್ಯಕ್ಕೆ ಅಕ್ಕಿ, ಬೆಳಕು, ಚಿನ್ನ ಕೊಡುವ ರಾಯಚೂರು ಜಿಲ್ಲೆಗೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ. ಕಳೆದ 500 ದಿನಗಳಿಂದ ಏಮ್ಸ್ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಯಾವೊಬ್ಬ ನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಶನಿವಾರ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬಸವರಾಜ್ ಕಳಸ ನೇತೃತ್ವದಲ್ಲಿ ಕಳೆದ 500 ದಿನಗಳಿಂದ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಅವರು, ಹೋರಾಟಗಾರರ ಜೊತೆ ಮಾತನಾಡಿ, ಆಮ್ ಆದ್ಮಿ ಪಕ್ಷದಿಂದ ಎಲ್ಲ ರೀತಿಯ ಬೆಂಬಲ ಕೊಡುವುದಾಗಿ ಘೋಷಿಸಿದರು.

ಕಾನೂನು ಪ್ರಕಾರ ಒಪ್ಪಿಗೆ ನೀಡಿದ್ದ ಐಐಟಿಯನ್ನು ನಮ್ಮಿಂದ ಕಿತ್ತುಕೊಳ್ಳಲಾಗಿದೆ. 371ಜಿ, ನಂಜುಂಡಪ್ಪ ವರದಿ ಈ ಭಾಗಕ್ಕೆ ಉಪಯೋಗವಾಗಿಲ್ಲ. ರೈತರಿಗೆ ನೀರು ಕೊಡಿ ಎಂದರೆ ಬ್ರಾಂದಿ ಕೊಡಲು ಈ ಸರಕಾರ ಹೊರಟಿದೆ ಎಂದು ರಾಜ್ಯ ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ಏಮ್ಸ್ ಗೆ ಜಾಗ ವಿದ್ಯುತ್ ಮತ್ತು ಉಳಿದ ಅನುಕೂಲ ಮಾಡಿಕೊಡುವುದು ರಾಜ್ಯ ಸರಕಾರ. ಹೀಗಾಗಿ, ರಾಜ್ಯ ಸರಕಾರ ಹೇಳುವ ಜಾಗದಲ್ಲಿ ಕೇಂದ್ರ ಸರಕಾರ ಏಮ್ಸ್ ಸ್ಥಾಪನೆ ಮಾಡಬೇಕು. ಇಲ್ಲವೆಂದರೆ ಇದು ಯಾವ ರೀತಿಯ ಪ್ರಜಾಪ್ರಭುತ್ವ. ಈ ಭಾಗಕ್ಕೆ ಅನಂತಕುಮಾರ್ ಅವರಿಂದ ಮೋಸ ಆಗಿದೆ. ಪ್ರಹ್ಲಾದ್ ಜೋಶಿ ಅವರಿಂದಲೂ ಮೋಸವಾಗುತ್ತಿದೆ ಎಂದು ಅವರು ಕಿಡಿಗಾರಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News