ಲೋಕಸಭಾ ಚುನಾವಣೆ | ರಾಜ್ಯದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಸ್ಪರ್ಧೆ

Update: 2024-04-08 15:28 GMT

ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಎ.26ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ಇಂದು ಕೊನೆಯ ದಿನವಾಗಿತ್ತು. ಅಂತಿಮವಾಗಿ 247 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಪ್ರಕಟಣೆ ತಿಳಿಸಿದೆ.

ಉಡುಪಿ ಚಿಕ್ಕಮಗಳೂರು-10, ಹಾಸನ-15, ದಕ್ಷಿಣ ಕನ್ನಡ-9, ಚಿತ್ರದುರ್ಗ-20, ತುಮಕೂರು-18, ಮಂಡ್ಯ-14, ಮೈಸೂರು-18, ಚಾಮರಾಜನಗರ-14, ಬೆಂಗಳೂರು ಗ್ರಾಮಾಂತರ-15, ಬೆಂಗಳೂರು ಉತ್ತರ-21, ಬೆಂಗಳೂರು ಕೇಂದ್ರ-24, ಬೆಂಗಳೂರು ದಕ್ಷಿಣ-22, ಚಿಕ್ಕಬಳ್ಳಾಪುರ-29 ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಳ್ಳಾರಿ ಬ್ರೂಸ್ಟೆಟ್ ಪೊಲೀಸ್ ಠಾಣೆ ತಂಡದವರು 5.60 ಲಕ್ಷ ರೂ.ನಗದು, 7.06 ಕೋಟಿ ರೂ.ಮೌಲ್ಯದ 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಮತ್ತು 103 ಕೆಜಿ ಹಳ್ಳೆಯ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಕ್ಷಿಪ್ರ ಪಡೆಯವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವನಹಳ್ಳಿಯಲ್ಲಿ 10 ಲಕ್ಷ ರೂ.ಮೌಲ್ಯದ 1411 ಫ್ಯಾನ್ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆದಾಯ ತಎರಿಗೆ ಇಲಾಖೆಯವರು 2.62 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,422 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 1,726 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 1,989 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 109 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 9,183 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,048 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News