ಗಂಗಾವತಿ | ಗಣೇಶ ಮೆರವಣಿಗೆ ವೇಳೆ ಕರ್ತವ್ಯ ಲೋಪ: ಮೂವರು ಪೊಲೀಸರ ಅಮಾನತು

Update: 2023-10-06 05:21 GMT

ಗಂಗಾವತಿ: ಗಣೇಶ ವಿಸರ್ಜನೆ ವೇಳೆ  ನಗರದ ಜಾಮಿಯಾ ಮಸೀದಿ ಮುಂದೆ ನಡೆದ ಅಹಿತಕರ ಘಟನೆಯನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಗಂಗಾವತಿ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್‌ ಅಡಿವೇಶ ಎಸ್. ಗುದಿಗೊಪ್ಪ, ಸಬ್‌ ಇನ್‌ಸ್ಪೆಕ್ಟರ್‌ ಕಾಮಣ್ಣ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಮರಿಯಪ್ಪ ಅಮಾನತುಗೊಂಡವರು. ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಿಗೋಡೆ ಅವರು ಅನಮಾತು ಮಾಡಿದ್ದಾರೆ ಎಂದು ಡಿವೈಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಎಂ.ಜಿ. ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಮುಂಭಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಂಗಳವಾರ ರಾತ್ರಿ ಕೆಲವರು ಕುಂಡದಲ್ಲಿ ಬೆಂಕಿಹಚ್ಚಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದ್ದರು. ಇದು ಮುಸ್ಲಿಂ ಸಮುದಾಯದವರ ಆಕ್ಷೇಪಕ್ಕೆ ಕಾರಣವಾಗಿ ವಾಗ್ವಾದ ನಡೆದಿತ್ತು. ಕರ್ತವ್ಯದ ವೇಳೆಯಲ್ಲಿಯೇ ಮೆರವಣಿಗೆ ಸಮಯದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಮರಿಯಪ್ಪ ಅವರನ್ನು ಹೊತ್ತು ಕುಣಿದಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಐವರ ವಿರುದ್ಧ ಎಫ್‌ ಐಆರ್

ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಮಂಗಳಾತರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಯಮನೂರ ರಾಠೋಡ್, ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚೆನ್ನಬಸವ ಹೂಗಾರ ಹಾಗೂ ಸಂಗಮೇಶ ಅಯೋಧ್ಯ ವಿರುದ್ಧ ಗಂಗಾವತಿ ನಗರ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News