ಸೌದಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್ ದತ್ತಾಂಶ ಲಭ್ಯವಾಗಿಲ್ಲ: ಹೈಕೋರ್ಟ್‍ಗೆ ಮಾಹಿತಿ
ಬೆಂಗಳೂರು, ಆ.18: ಧರ್ಮನಿಂದನೆ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದತ್ತಾಂಶ ಲಭ್ಯವಾಗದಿರುವುದರಿಂದ ತನಿಖೆ ಮುಂದುವರಿಸಲಾಗಿಲ್ಲ ಎಂದು ತನಿಖಾಧಿಕಾರಿ ಹೈಕೋರ್ಟ್‍ಗೆ ತಿಳಿಸಿದ್ದಾರೆ.
ಈ ಸಂಬಂಧ ಶೈಲೇಶ್ ಪತ್ನಿ ಕವಿತಾ ಶೈಲೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ತನಿಖಾಧಿಕಾರಿಯನ್ನು ಕುರಿತು ನ್ಯಾಯಪೀಠವು, ‘ತನಿಖೆ ಯಾವ ಹಂತದಲ್ಲಿದೆ? ಏನೆಲ್ಲಾ ಆಗಿದೆ? ಶೈಲೇಶ್ ಕುಮಾರ್ ಅವರನ್ನು ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಬೇಕು ಎಂಬ ಶಂಕೆಯ ಕುರಿತಾದ ತನಿಖೆ ಏನಾಗಿದೆ?‘ ಎಂದು ರಾಜ್ಯ ಸರಕಾರವನ್ನು ಮೌಖಿಕವಾಗಿ ಪ್ರಶ್ನಿಸಿತು.
ಇದಕ್ಕೆ ತನಿಖಾಧಿಕಾರಿಯು ‘ಅಗತ್ಯ ದತ್ತಾಂಶ ಲಭ್ಯವಾಗದಿರುವುದರಿಂದ ತನಿಖೆ ಮುಂದುವರಿಸಲಾಗಿಲ್ಲ‘ ಎಂದು ಪೀಠಕ್ಕೆ ವಿವರಿಸಿದರು. ಏತನ್ಮಧ್ಯೆ, ಕೇಂದ್ರ ಸರಕಾರದ ಪರ ವಕೀಲ ಮಧುಕರ್ ದೇಶಪಾಂಡೆ, ‘ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯು ಮೇಲ್ಮನವಿ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ, ಭಾರತ ಸರಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಎರಡು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಮಾನ್ಯ ಮಾಡಿದ ನ್ಯಾಯಪೀಠವು ವಿಚಾರಣೆಯನ್ನು ಆ. 31ಕ್ಕೆ ಮುಂದೂಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ‘ಶೈಲೇಶ್ ಕುಮಾರ್ ವಿಚಾರದಲ್ಲಿ ಕೇಂದ್ರ ಸರಕಾರ ಗಂಭೀರತೆ ಪ್ರದರ್ಶಿಸಬೇಕು‘ ಎಂದು ಸೂಚಿಸಿತ್ತು. ರಾಜ್ಯದ ತನಿಖಾಧಿಕಾರಿಯ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿತ್ತು.