ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆ, ವೃತ್ತಿಪರತೆ ಹೊಂದಿರಬೇಕು: ಹೈಕೋರ್ಟ್
ಬೆಂಗಳೂರು: ವೈದ್ಯಕೀಯ ವೃತ್ತಿ ಕೈಗೊಳ್ಳುವಾಗ ಸಂಬಂಧಪಟ್ಟ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ ಹೊಂದಿರಲೇಬೇಕು. ಈ ವೃತ್ತಿಯಲ್ಲಿ ವೃತ್ತಿಪರ ಮಾನದಂಡ ಮತ್ತು ನಡವಳಿಕೆ ಕಾಯ್ದುಕೊಳ್ಳುವುದು ಸಹ ಅತ್ಯಂತ ಪ್ರಮುಖವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕ್ಲಿನಿಕ್ ನೋಂದಣಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದು ಆಕ್ಷೇಪಿಸಿ ಉಡುಪಿಯ ಡಾ.ಮೋಹನ್ ಭಟ್ಟ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.
ಕೆಪಿಎಂಇ ಕಾಯಿದೆ ಸೆಕ್ಷನ್ 5(9)(ಬಿ) ಪ್ರಕಾರ ಕ್ಲಿನಿಕ್ ನೋಂದಣಿಗೆ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲೋಪತಿ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಕೈಕೊಳ್ಳುವವವರಿಗೆ ಭಾರತೀಯ ವೈದ್ಯಕೀಯ ಮಂಡಳಿ ಪ್ರಮಾಣಪತ್ರ ನೀಡುತ್ತದೆ ಎಂದು ವಿಭಾಗೀಯ ನ್ಯಾಯಪೀಠವು ಹೇಳಿದೆ.
ಅಲ್ಲದೆ, ಪ್ರತಿಯೊಂದು ವೈದ್ಯಕೀಯ ವಿಭಾಗಕ್ಕೂ ಒಂದೊಂದು ನಿಯಂತ್ರಣ ಸಂಸ್ಥೆಗಳಿದ್ದು, ಅವುಗಳ ಪ್ರಮಾಣ ಪತ್ರವನ್ನು ಪಡೆಯಲೇಬೇಕಾಗುತ್ತದೆ. ಆದರೆ, ಅವುಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಈ ಎಲ್ಲ ಅಂಶಗಳನ್ನು ಏಕಸದಸ್ಯ ಪೀಠ ದಾಖಲಿಸಿದೆ. ಹೀಗಾಗಿ, ಏಕ ಸದಸ್ಯ ಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿಯಲ್ಲಿ ಏನಿದೆ: ಅರ್ಜಿದಾರರು ಬಿಎಸ್‍ಸಿ ಪದವಿ ಹಾಗೂ ಪರ್ಯಾಯ ವೈದ್ಯಕೀಯ ಡಿಪ್ಲೋಮಾ ಮತ್ತು ಕೊಲ್ಕತ್ತಾದ ಭಾರತೀಯ ಪರ್ಯಾಯ ವೈದ್ಯಕೀಯ ಮಂಡಳಿಯಿಂದ ಎಂಡಿ ಪದವಿ ಪಡೆದಿರುವುದಾಗಿ ಹೇಳಿಕೊಂಡು ಉಡುಪಿ ಪಟ್ಟಣದಲ್ಲಿ ಕ್ಲಿನಿಕ್ ಆರಂಭಿಸಲು ಮತ್ತು ನೋಂದಣಿ ಮಾಡಲು ಅನುಮತಿ ಕೋರಿ 2010ರಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ-2007ರಡಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಜಿದಾರರಿಗೆ ಹಲವು ನೋಟಿಸ್‍ಗಳನ್ನು ಕಳುಹಿಸಿ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ವೈದ್ಯಕೀಯ ವೃತ್ತಿಪರರು ಪ್ರಮಾಣಪತ್ರ ಸಲ್ಲಿಸುವಂತೆ ಕೋರಿದ್ದರು. ಆದರೆ, ಆ ಪ್ರಮಾಣ ಪತ್ರವನ್ನು ಅರ್ಜಿದಾರರು ಸಲ್ಲಿಸಿರಲಿಲ್ಲ. ಹೀಗಾಗಿ, ಅದನ್ನು ಪರಿಗಣಿಸಿ ಅರ್ಜಿದಾರರ ಮನವಿ ತಿರಸ್ಕರಿಸಿ ಜಿಲ್ಲಾಧಿಕಾರಿಗಳು 2018ರ ಡಿ.6ರಂದು ಹಿಂಬರಹ ನೀಡಿದ್ದರು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠವು ಅರ್ಜಿ ವಜಾಗೊಳಿಸಿ 2023ರ ಮಾ.12ರಂದು ಆದೇಶಿಸಿತ್ತು. ಇದರಿಂದ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ, ತಮ್ಮ ವಿಭಾಗ ಆಯುμï ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ, ಆದರೆ, ತಾನು ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳಲು ಎಲ್ಲ ಅರ್ಹತೆ ಹೊಂದಿದ್ದೇನೆ ಎಂದು ವಾದ ಮಂಡಿಸಿದ್ದರು.