ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಾಯಕರ ನಡುವೆ ವಾಕ್ಸಮರ: ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದ ಯತ್ನಾಳ್, ರಾಜಿ ಮಾಡಿಕೊಂಡಿಲ್ಲ ಎಂದ ಬೊಮ್ಮಾಯಿ
ಬೆಳಗಾವಿ, ಜೂ.25: ನಗರದಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಮಾತಿನೇಟಿಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ಕೊಟ್ಟರು.
ಮೊದಲು ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಕಾಂಗ್ರೆಸ್ ಸರಕಾರ ಐದು ವರ್ಷ ಉಳಿಯುವುದಿಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವುದಿಲ್ಲ. ಆಗ ಡಿಕೆಶಿಯವರು ಬಸವರಾಜ ಬೊಮ್ಮಾಯಿ ಅವರ ಮನೆಗೆ ಬರುತ್ತಾರೆ. ಆ ಮೂಲಕ ಸೋನಿಯಾ ಗಾಂಧಿ ಅವರನ್ನು ಹೆದರಿಸಲು ಯತ್ನಿಸುತ್ತಾರೆ. ಬೊಮ್ಮಾಯಿ ಅವರೇ ಇಂಥದ್ದಕ್ಕೆ ಅವಕಾಶ ಮಾಡಿ ಕೊಡಬೇಡಿ. ಅಂಥವರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಸೌಜನ್ಯದ ಭೇಟಿ ಎನ್ನುತ್ತಾರೆ. ಆದರೆ, ಉದ್ದೇಶವೇ ಬೇರೆ ಇರುತ್ತದೆ. ಮುಖ್ಯಮಂತ್ರಿ ಕುರ್ಚಿಗಾಗಿ ಬರುವ ಅವರನ್ನು ನಾವೇಕೆ ಮನೆಗೆ ಬಿಟ್ಟುಕೊಳ್ಳಬೇಕು ಎಂದೂ ಪ್ರಶ್ನಿಸಿದರು.
ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ, ಅವರ ಮುಖವನ್ನೂ ನೋಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ರೀತಿ ನಾವು ಕೂಡ ಇನ್ನು ಮುಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರ ಮನೆಗೆ ಹೋಗುವುದಿಲ್ಲ, ಹಲ್ಲು ಕಿಸಿಯುವುದಿಲ್ಲ ಎಂದು ನಿರ್ಧಾರ ಮಾಡೋಣ. ಹಾಗಾದರೆ ಮಾತ್ರ ಪಕ್ಷ ಉಳಿಯುತ್ತದೆ. ನೀವು ಸ್ವಾಗತ–ಸುಸ್ವಾಗತ ಎಂದರೆ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ ಎಂದು ಯತ್ನಾಳ್ ಹೇಳಿದರು.
ಇದಕ್ಕೆ ವೇದಿಕೆಯಲ್ಲೇ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ನಾನು ಎಂದಿಗೂ ರಾಜಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅದು ಕನ್ನಡಿಗರ ಸೌಜನ್ಯ. ಯಾರೋ ಮನೆಗೆ ಬಂದ ತಕ್ಷಣ ನಾವು ರಾಜಿ ಆಗುವುದಿಲ್ಲ ಗೌಡ್ರೆ. ನೀವು ತಲೆ ಕೆಡಿಸಿಕೊಳ್ಳಬೇಡಿ. ಕೆಲವರು ಮನೆಗೆ ಹೋಗದೆಯೇ ಒಳಗೊಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ’ ಎಂದು ಹೇಳಿದರು.
ಅಕ್ಕಿಯಲ್ಲಿ ಪರ್ಸಂಟೇಜ್: ವಿವೇಚನೆ ಇಲ್ಲದೇ ಕಾಂಗ್ರೆಸ್‍ನವರು ಉಚಿತ ಅಕ್ಕಿ ಘೋಷಿಸಿದ್ದಾರೆ. ಅಕ್ಕಿ ಖರೀದಿಯಲ್ಲಿ ಕೆಲ ಸಚಿವರು ‘ಪಸೆರ್ಂಟೇಜ್’ ಹಂಚಿಕೊಳ್ಳುತ್ತಿದ್ದಾರೆ. ಖರೀದಿಯಲ್ಲಿ ಏನೆಲ್ಲ ಹುನ್ನಾರ ನಡೆದಿದೆ ಎಂದು ನನಗೆ ಗೊತ್ತಿದೆ. ಶೀಘ್ರದಲ್ಲೇ ಇವರ ಕರಾಳ ಮುಖ ಬಯಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್‍ಗೆ ಇರುವುದು ಎರಡೇ ಪ್ರಶ್ನೆ. ಒಂದು ಮೋದಿ ಅವರನ್ನು ಹೇಗೆ ಸೋಲಿಸುವುದು? ಇನ್ನೊಂದು ರಾಹುಲ್ ಗಾಂಧಿ ಮದುವೆ ಯಾವಾಗ ಮಾಡುವುದು? ಇವೆರಡೂ ಸಾಧ್ಯವಿಲ್ಲ ಎಂದು ಅವರು ಲೇವಡಿ ಮಾಡಿದರು.