ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

Update: 2024-06-06 13:46 GMT

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಜನ ಸೇವೆ, ಕ್ರೀಡಾ ಸಚಿವ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಲ್ಲೂ ನನ್ನ ಹೆಸರು ಉಲ್ಲೇಖ ಆಗಿಲ್ಲ. ಆದರೂ, ಯಾರಿಗೂ ಮುಜುಗರ ಆಗಬಾರದು ಎಂಬ ಕಾರಣದಿಂದ ಆತ್ಮಸಾಕ್ಷಿಯಾಗಿ, ಸ್ವ ಇಚ್ಛೆಯಿಂದ, ಯಾವುದೆ ಒತ್ತಡ ಇಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ವಿಶೇಷ ತನಿಖಾ ತಂಡ (ಎಸ್‍ಐಟಿ)ದವರು ಈಗಾಗಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾನು ಸಚಿವ ಸ್ಥಾನದಲ್ಲಿದ್ದರೆ ತನಿಖೆಗೆ ತೊಂದರೆಯಾಗಬಹುದು. ಈ ಪ್ರಕರಣವು ರಾಜ್ಯದ ಜನರಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ. ನಿಷ್ಪಕ್ಷಪಾತವಾಗಿ ಈ ತನಿಖೆ ನಡೆಯಬೇಕು ಎಂಬುದು ನನ್ನ ಉದ್ದೇಶ ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.

ಪ್ರಕರಣದಲ್ಲಿ ನಿನ್ನ ಹೆಸರು ಎಲ್ಲೂ ಉಲ್ಲೇಖ ಆಗಿಲ್ಲ. ರಾಜೀನಾಮೆ ನೀಡಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಸಲಹೆಯನ್ನು ನನ್ನ ಹಿತೈಷಿಗಳು ನೀಡಿದ್ದಾರೆ. ಆದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‍ಗೆ ಮುಜುಗರ ಆಗಬಾರದು ಎಂಬ ಕಾರಣಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಬರೆದಿಟ್ಟಿರುವ ಡೆತ್‍ನೋಟ್‍ನಲ್ಲಿ ನನ್ನ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ನಾನು ನಿರ್ದೋಷಿ ಎಂದು ಸಾಬೀತಾದ ಮೇಲೆ ಪುನಃ ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ನಾಗೇಂದ್ರ ಇದೇ ವೇಳೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News