ಸರಕಾರ ಅಸ್ಥಿರಗೊಳಿಸುವ ಬಿಜೆಪಿ- ಜೆಡಿಎಸ್ ನಾಯಕರ ಉದ್ದೇಶ ಈಡೇರಲ್ಲ: ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-08-05 11:46 GMT

ಬೆಂಗಳೂರು : ಬಹುಮತ ಹೊಂದಿರುವ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ-ಜೆಡಿಎಸ್ ನಾಯಕರ ಉದ್ದೇಶ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಮೈತ್ರಿ  ಪಕ್ಷಗಳ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸೋಮವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಬೌರಿಂಗ್ ಹಾಗೂ ಚರಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿರುವ ವಿಚಾರವಾಗಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

"ರಾಜ್ಯದ ಜನತೆ ನಮಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ನೀಡಿದ್ದರು. ಈಗ ನಮ್ಮ ಸರಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜನತೆಯ ಮುಂದೆ ಮಾಡುವ ಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವೀಯಾಗುವುದಿಲ್ಲ" ಎಂದು ವಾಗ್ದಳಿ ನಡೆಸಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ದಲ್ಲಿ ಹಗರಣ ನಡೆದಿದೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಮುಡಾದಲ್ಲಿ ಹಗರಣ ಏನಾಗಿದೆ?. ಈ ಹಗರಣ ಮಾಡಿದವರು ಯಾರು? ಇದು ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವ ಹಗರಣವಲ್ಲವೇ? ಎಂದು ತಿರುಗೇಟು ನೀಡಿದರು.

“ಮುಡಾದಲ್ಲಿ ನಡೆದಿರುವ ಹಗರಣ ಏನೆಂಬುದನ್ನು ಪಾದಯಾತ್ರೆ ನಡೆಸುತ್ತಿರುವ ಎರಡು ಪಕ್ಷಗಳ ನಾಯಕರು ಹೇಳಬೇಕು. ಹಿಂದೆ ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿ ಲೂಟಿ ಹೊಡೆದಿದೆ. ಪ್ರತಿಯೊಂದು ಇಲಾಖೆಯಲ್ಲೂ ನೂರಾರು ಕೋಟಿ ಹಗರಣ ನಡೆಸಿರುವ ಇವರು ಈಗ ಯಾವ ಮುಖ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ಪಾಟೀಲ್ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News