ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟೌನ್‍ಶಿಪ್ ನಿರ್ಮಾಣಕ್ಕೆ ನಿರ್ಧಾರ : ಸಚಿವ ಝಮೀರ್ ಅಹ್ಮದ್

Update: 2024-09-12 12:52 GMT

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ಐದು ಕಡೆ ಗೃಹಮಂಡಳಿ ವತಿಯಿಂದ ಟೌನ್ ಶಿಪ್ ನಿರ್ಮಾಣ ಸಂಬಂಧ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿರುವ ರಾಜ್ಯ ಗೃಹ ಮಂಡಳಿ ಕಚೇರಿಯಲ್ಲಿ ಶಾಸಕರ ಜತೆ ಈ ಸಂಬಂಧ ಅವರು ನಡೆಸಿದ ಸಭೆಯಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಜಮೀನು ಸ್ವಾಧೀನ ಸಂಬಂಧ ರೈತರ ಅದಾಲತ್ ನಡೆಸಿ ಅವರ ಒಪ್ಪಿಗೆ ಪಡೆದ ನಂತರ ಮುಂದಿನ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು.

ದಾಬಸ್ ಪೇಟೆ, ಸೋಲೂರು, ಹೊಸಕೋಟೆ, ಬಿಡದಿ, ರಾಮನಗರ ಭಾಗದಲ್ಲಿ ಜಮೀನು ಲಭ್ಯತೆ ಆಧಾರದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದ್ದು, ಪೂರ್ವಭಾವಿಯಾಗಿ ರೈತರ ಅದಾಲತ್ ನಡೆಸೋಣ ನಂತರ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳೋಣ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಶಾಸಕರಾದ ಶರತ್ ಬಚ್ಚೆಗೌಡ, ಮಾಗಡಿ ಬಾಲಕೃಷ್ಣ, ನೆಲಮಂಗಲ ಶ್ರೀನಿವಾಸ್, ದೊಡ್ಡಬಳ್ಳಾಪುರದ ಧೀರಜ್ ಮುನಿರಾಜು, ರೈತರು ಜಮೀನು ಕೊಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದು 50:50 ಹಂಚಿಕೆ ಆಧಾರದಲ್ಲಿ ಒಪ್ಪಿದರೆ ನಮ್ಮ ವಿರೋಧ ಇಲ್ಲ ಎಂದು ಹೇಳಿದರು.

ಗೃಹ ಮಂಡಳಿ ವತಿಯಿಂದ ಐದು ಕಡೆ ತಲಾ ಎರಡು ಸಾವಿರ ಎಕರೆ ಜಾಗದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದ್ದು, ಆದಷ್ಟು ಬೇಗ ಈ ಸಂಬಂಧ ಪ್ರಕ್ರಿಯೆ ಪೂರ್ಣಗೊಳಿಸಲು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದರು.

ಸಭೆಯಲ್ಲಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ಆಯುಕ್ತೆ ಕವಿತಾ ಮಣ್ಣಿಕೇರಿ, ಮುಖ್ಯ ಎಂಜಿನಿಯರ್ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News