ಪ್ರವಾಹ, ಕೋಮು ಗಲಭೆ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ 'ಸಾಂತ್ವನ ' ಯೋಜನೆಗೆ ಸಚಿವ ಝಮೀರ್ ಅಹ್ಮದ್ ಖಾನ್ ಚಾಲನೆ
ಬೆಂಗಳೂರು: ಪ್ರವಾಹ, ಅಗ್ನಿ ದುರಂತ, ಕೋಮು ಗಲಭೆ ಹಾಗೂ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ನೇರವಾಗಲು 'ಸಾಂತ್ವನ ' ಯೋಜನೆ ಆರಂಭಿಸಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ನೂತನ ಯೋಜನೆಗೆ ಚಾಲನೆ ನೀಡಿ, ಪ್ರಕೃತಿ ವಿಕೋಪ ಹಾಗೂ ಕೋಮು ಗಲಭೆಯಲ್ಲಿ ಸಂತ್ರಸ್ತರಾಗಿ ಮನೆ ಹಾಗೂ ಅಂಗಡಿ ಕಳೆದುಕೊಳ್ಳುವ ಕುಟುಂಬ ಗಳಿಗೆ ಐದು ಲಕ್ಷ ರೂ. ವರೆಗೆ ಸಾಲ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದರು.
ಐದು ಲಕ್ಷ ರೂ. ಪೈಕಿ ಶೇ.50 ರಷ್ಟು ಅಂದರೆ 2.50 ಲಕ್ಷ ರೂ. ಸಾಲ, ಉಳಿದ 2.50 ಲಕ್ಷ ಸಬ್ಸಿಡಿ ದೊರೆಯಲಿದ್ದು ಸಾಲಕ್ಕೆ ಶೇ.3 ರಷ್ಟು ಬಡ್ಡಿ ವಿಧಿಸಲಾಗುವುದು. ಈ ಮೊತ್ತದಲ್ಲಿ ಸಂತ್ರಸ್ತ ಕುಟುಂಬಗಳು ವ್ಯಾಪಾರ ಅಥವಾ ಇತರೆ ಉದ್ಯೋಗದಲ್ಲಿ ತೊಡಗಬಹುದುಎಂದು ತಿಳಿಸಿದರು.
ಅಲ್ಪಸಂಖ್ಯಾತರ ಸಮುದಾಯದ ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ನೆರವು ಸಿಗಲಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳಿಗೆ ನೆರವು ಸಿಗಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಪಾಲ್ಗೊಂಡರು.
ಕೆ ಎಂ ಡಿಸಿ ವ್ಯವಸ್ಥಾಪಕ ನಿರ್ದೇಶಕ ನಜೀರ್, ಇಲಾಖೆ ನಿರ್ದೇಶಕ ಮನೋಜ್ ಜೈನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯೋಜನಾ ಸಚಿವ ಡಿ. ಸುಧಾಕರ್ ಅವರೊಂದಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿ ದರು.
ಯೋಜನೆ ಇಲಾಖೆ ಸಚಿವ ಡಿ. ಸುಧಾಕರ್ ಅವರೊಂದಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆ ಗಳ ಸಂಬಂಧ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಗುರುವಾರ ಕೆ ಎಂ ಡಿಸಿ ಸಭಾಂಗಣ ದಲ್ಲಿ ಸಭೆ ನಡೆಸಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಗೃಹ ಮಂಡಳಿ ಆಯುಕ್ತ ರಾದ ಕವಿತಾ ಮಣ್ಣಿಕೇರಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ ಉಪಸ್ಥಿತರಿದ್ದರು.