ಸಿಎಂ ಸಮ್ಮುಖದಲ್ಲಿ ವಸತಿ ಇಲಾಖೆ ಪರಿಸ್ಥಿತಿ ಬಿಚ್ಚಿಟ್ಟ ಸಚಿವ ಝಮೀರ್ ಅಹಮದ್
ಬೆಂಗಳೂರು: ವಸತಿ ಇಲಾಖೆ ವ್ಯಾಪ್ತಿಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ವಂತಿಗೆ ಪಾವತಿ ಆಗುತ್ತಿಲ್ಲ, ಹೀಗಾಗಿ 2015 ರಿಂದ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ ಎಂದು ವಸತಿ ಸಚಿವ ಝಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಮ್ಮುಖದಲ್ಲಿ ನೇರವಾಗಿಯೇ ಹೇಳಿದರು.
ಬುಧವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಸಭೆಯಲ್ಲಿ ವಸತಿ ಇಲಾಖೆ ಯೋಜನೆ ಬಗ್ಗೆ ಪ್ರಸ್ತಾಪಿಸಿ, ಅತ್ತ ಫಲಾನುಭವಿಗಳು ವಂತಿಗೆ ಪಾವತಿಸುತ್ತಿಲ್ಲ, ಇತ್ತ ಯೋಜನೆ ಪೂರ್ಣ ಗೊಳ್ಳುತ್ತಿಲ್ಲ ಎಂಬಂತಾಗಿದೆ ಎಂದು ಸಚಿವರು ಹಾಗೂ ಅಧಿಕಾರಿಗಳ ಮುಂದೆಯೇ ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ 2015 ರಿಂದ 2023 ರವರೆಗೆ 1.80 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಪ್ರತಿ ಮನೆಗೆ 7.50 ಲಕ್ಷ ರೂ. ವೆಚ್ಚ ಆಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ 3.50 ಲಕ್ಷ ರೂ. ಮೊತ್ತದ ಕೆಲಸ ಆಗಿರುವುದು ಬಿಟ್ಟರೆ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ಮನೆಗಳು ಅರ್ಧ ದಲ್ಲೇ ನಿಂತಿವೆ. 6690 ಕೋಟಿ ರೂ. ಫಲಾನುಭ ವಿಗಳ ವಂತಿಗೆ ಬರಬೇಕಿದ್ದು 310 ಕೋಟಿ ರೂ. ಮಾತ್ರ ಬಂದಿದೆ ಎಂದು ವಿವರಣೆ ನೀಡಿದರು..
310 ಕೋಟಿ ರೂ. ನಲ್ಲೂ ಎಸ್ ಸಿ ಎಸ್ ಟಿ ನಿಗಮ, ಕಾರ್ಮಿಕ ಇಲಾಖೆ, ನಗರ ಸ್ಥಳೀಯ ಸಂಸ್ಥೆಯ ಮೊತ್ತ ಸೇರಿದ್ದು ಫಲಾನುಭವಿಗಳು ಕೊಟ್ಟಿರುವುದು ಕೇವಲ 110 ಕೋಟಿ ರೂ. ಮಾತ್ರ ಎಂದು ಅಂಕಿ ಸಂಖ್ಯೆ ಸಹಿತ ತಿಳಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಲ್ಲೂ2013 ರಿಂದ ಇದುವರೆಗೆ 53 ಸಾವಿರ ಮನೆಗಳು ಫಲಾನುಭವಿಗಳ ವಂತಿಗೆ ಪಾವತಿ ಮಾಡದೆ ಪೂರ್ಣಗೊಂಡಿಲ್ಲ. 2.33 ಲಕ್ಷ ಮನೆ ಪೂರ್ಣಗೊಳಿಸಲು 7500 ಕೋಟಿ ರೂ. ಬೇಕಿದ್ದು ಸರ್ಕಾರ ದಿಂದಲೇ ನೆರವು ನೀಡಿದರೆ ಮಾತ್ರ ಯೋಜನೆ ಪೂರ್ಣ ಗೊಳಿಸಿ ಬಡವರಿಗೆ ಮನೆ ಕೊಡಲು ಸಾಧ್ಯ ಎಂದು ಪ್ರತಿ ಪಾದಿ ಸಿದರು.
ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಪೂರ್ಣ ಗೊಳಿಸಲು 250 ಕೋಟಿ ರೂ. ಅಗತ್ಯ ವಿದೆ. ಅಷ್ಟು ನೆರವು ದೊರೆತರೆ ಹತ್ತು ಸಾವಿರ ಮನೆ ಕೊಡಬಹುದು ಎಂದು ಹೇಳಿದರು.
ವಸತಿ ಇಲಾಖೆ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆಯೋಣ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ಸಿ ಇ ಒ ವಿರುದ್ಧ ಕ್ರಮ
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಸಭೆಯ ಗಮನಕ್ಕೆ ತಂದ ಝಮೀರ್ ಅಹಮದ್ ಅವರು, ಅಲ್ಲಿ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಇಲ್ಲದಿರುವುದು ಪ್ರಸ್ತಾಪಿಸಿ ಅಲ್ಲಿನ ಸ್ಥಿತಿ ನೋಡಿದರೆ ನಾಗರೀಕ ಸಮಾಜ ತಲೆ ತಗ್ಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ನಾನು ಹಾಸ್ಟೆಲ್ ಗಳಿಗೆ ದಿಢಿರ್ ಭೇಟಿ ನೀಡಲಿದ್ದು ಲೋಪ ಕಂಡು ಬಂದರೆ ಸಿ ಇ ಒ ಅವರನ್ನೇ ಅಮಾನತು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಅವರ ಎದುರೇ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಯವರು, ಜಮೀರ್ ಅವರು ಹೇಳಿದಂತೆ ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ, ಶುಚಿತ್ವ ಕಾಪಾಡಿ ಎಂದು ತಾಕೀತು ಮಾಡಿದರು. ಅವರು ವರದಿ ಕೊಟ್ಟರೆ ನಾನೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.