ಅಧಿಕಾರಿಗಳ ಸಭೆ ಕರೆಯುವಂತೆ ಸಿಎಂಗೆ ಪತ್ರ ಬರೆದ ಶಾಸಕ ಬಸವರಾಜ ರಾಯರಡ್ಡಿ

Update: 2023-09-02 06:57 GMT

 ಬಸವರಾಜ ರಾಯರಡ್ಡಿ

ಕೊಪ್ಪಳ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಆಗ್ರಹಿಸಿದ್ದಾರೆ.

ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು,  ''ಜೆಸ್ಕಾಂ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಉಪಕರಣಗಳ ಪೂರೈಕೆಯೂ ವಿಳಂಬವಾಗುತ್ತಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಬೇಕು'' ಎಂದು ಆಗ್ರಹಿಸಿದ್ದಾರೆ. 

''ರೈತರ ಜಮೀನುಗಳ ನೀರಾವರಿ ಪಂಪ್‌ಸೆಟ್‌ಗಳಿಗೆ ಜೆಸ್ಕಾಂ ವಿದ್ಯುತ್‌ ಸರಬರಾಜು ಮಾಡುತ್ತಿದೆ. ಗಂಗಾ ಕಲ್ಯಾಣ ಯೋಜನೆಯ ರೈತರ ಪಂಪ್‌ಸೆಟ್‌ಗಳು ಕೂಡ ಇವೆ. ಹಿಂದಿನ ಎರಡು ತಿಂಗಳುಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್‌ ಸರಬರಾಜು ಉಪಕರಣಗಳ ಬದಲಾವಣೆಯಾಗಿಲ್ಲ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

''ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಕೆವಿಎ, 63 ಕೆವಿಎ ಮತ್ತು 100 ಕೆವಿಎ ಟ್ರಾನ್ಸ್‌ಫಾರ್ಮ‌್ರಗಳ ಅಳವಡಿಕೆ ಮತ್ತು ಬದಲಾವಣೆ ಮಾಡಲು ಆಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಮಳೆ ಕೊರತೆಯಿಂದಾಗಿ ಪರದಾಡುತ್ತಿರುವ ರೈತರಿಗೆ ಜೆಸ್ಕಾಂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ರೈತರಿಗೆ ಸಂಕಷ್ಟ ಹೆಚ್ಚಾಗಿದೆ'' ಎಂದು ಪತ್ರದಲ್ಲಿ ಮುಖ್ಯಮಂತ್ರಿಗಳ ಗಮನ ಸಳೆದಿದ್ದಾರೆ. 

''ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಬೆಳೆ ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ಇರುವ ಬೆಳೆಗಳನ್ನಾದರೂ ಉಳಿಸಿಕೊಳ್ಳಬೇಕು ಎಂದು ರೈತರು ಪಂಪ್‌ಸೆಟ್‌ಗಳ ಮೂಲಕ ನೀರು ಹರಿಸುತ್ತಿದ್ದಾರೆ. ಎಲ್ಲ ರೈತರು ಏಕಾಏಕಿ ಒಂದೇ ಸಮಯದಲ್ಲಿ ಪಂಪ್‌ಸೆಟ್‌ ಚಲಾವಣೆ ಮಾಡುತ್ತಿರುವ ಕಾರಣ ಓವರ್ ಲೋಡ್ ಆಗಿ ಟ್ರಾನ್ಸ್‌ಫಾರ್ಮರ್‌ ಗಳು ಸುಟ್ಟು ಹೋಗುತ್ತಿವೆ. ಆದ್ದರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್‌ ಸರಬರಾಜು ಮಾಡಲು ಹೆಚ್ಚುವರಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮ‌್ರಗಳನ್ನು ಅಳವಡಿಸಬೇಕಾಗಿದೆ'' ಎಂದು ಅವರು ತಿಳಿಸಿದ್ದಾರೆ. 

''ಯಲಬುರ್ಗಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮ‌್ರಗಳು ಸುಟ್ಟು ಹೋಗಿವೆ. ಆದ್ದರಿಂದ ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು, ಇಲಾಖೆ ಸಚಿವರನ್ನು ಒಳಗೊಂಡ ಸಭೆ ನಡೆಸಬೇಕು'' ಎಂದು ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. 

----------------------------

ಶಾಸಕರ ಪತ್ರ: ಡಿ. ಕೆ.ಶಿವಕುಮಾ ಸ್ಪಷ್ಟನೆ

 ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂಗೆ ಬರೆದಿರುವ ಪತ್ರದ ವಿಚಾರವಾಗಿ ಕೇಳಿದ ಪಶ್ನೆಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್,  "ಶಾಸಕರದ್ದು ಒಂದಷ್ಟು ಬೇಡಿಕೆಗಳು, ತೊಂದರೆಗಳು ಇರುತ್ತವೆ, ಅವುಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳಬಾರದೇ? ಶಾಸಕರು ತಮ್ಮ ನೋವು ಸಮಸ್ಯೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ?. ಪಕ್ಷದ ಒಳಗೆ ಶಿಸ್ತು ಇದೆ ಯಾವುದೇ ತೊಂದರೆ ಇಲ್ಲ. ಯಾವ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ" ಎಂದು ಸ್ಪಷ್ಟನೆ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News