ಕಾವೇರಿ ನೀರಿನ ವಿಚಾರದಲ್ಲಿ ಮೋದಿ ಸರಕಾರ ಕರ್ನಾಟಕದ ಜೊತೆಗಿದೆ: ಸಂಸದ ತೇಜಸ್ವಿ ಸೂರ್ಯ

Update: 2023-09-29 12:42 GMT

ಬೆಂಗಳೂರು, ಸೆ. 29: ‘ಕಾಂಗ್ರೆಸ್ಸಿನವರು ಬಿಜೆಪಿಯ 25 ಮಂದಿ ಸಂಸದರ ಬಗ್ಗೆ ಮಾತನಾಡುತ್ತಾರೆ. ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ಮೋದಿ ಸರಕಾರ ಹಿಂದೆಯೂ, ಮುಂದೆಯೂ ಕರ್ನಾಟಕದ ಜೊತೆಗಿದೆ. ರಾಜ್ಯದ 25 ಸಂಸದರೂ ರಾಜ್ಯದ ನೆಲ, ಜಲದ ಪರವಾಗಿದ್ದಾರೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀರಿನಲ್ಲಿ ರಾಜಕೀಯ ನಮ್ಮದಲ್ಲ. ಕರ್ನಾಟಕಕ್ಕೆ ನಮ್ಮ ಬದ್ಧತೆ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 24, 25ನೆ ಸಭೆಯಲ್ಲಿ ರಾಜ್ಯದ ಪರವಾಗಿ ಸಂಸದರು ನಿಂತಿದ್ದಾರೆ. ರಾಜ್ಯ ಸರಕಾರದ ವಸ್ತುಸ್ಥಿತಿ ಕುರಿತು ವರದಿಯನ್ನು ನಾವು ಬೆಂಬಲಿಸಿದ್ದೇವೆ. ಇದರ ಹಿಂದೆ ರಾಜ್ಯ 25 ಸಂಸದರ ಪ್ರಯತ್ನ ಇತ್ತು’ ಎಂದು ಹೇಳಿದರು.

ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ನಾನು, ಪಿ.ಸಿ.ಮೋಹನ್, ಸದಾನಂದಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಇದಕ್ಕಾಗಿ ಶ್ರಮಿಸಿದ್ದೇವೆ. ನಾನು, ಪಿ.ಸಿ.ಮೋಹನ್, ಸದಾನಂದ ಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಪ್ರಲ್ಹಾದ್ ಜೋಶಿಯವರ ನೇತೃತ್ವದಲ್ಲಿ ಕೇಂದ್ರ ಸಚಿವರನ್ನೂ ಭೇಟಿ ಮಾಡಿದ್ದೇವೆ ಎಂದು ವಿವರ ನೀಡಿದರು.

ರಾಜ್ಯ ಸರಕಾರದ ನಿಲುವನ್ನು ಸತತವಾಗಿ ನಾವು ಸಮರ್ಥಿಸಿದ್ದೇವೆ. ಕರ್ನಾಟಕದಲ್ಲಿ ನೀರಿನ ಕೊರತೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಪರವಾಗಿ ಕೇಂದ್ರದ ಅಧಿಕಾರಿಗಳು ವಾದ ಮಾಡಿಲ್ಲವೆಂದು ಸಿಎಂ, ಡಿಸಿಎಂ ಅವರು ದಾಖಲೆ ನೀಡಿ ಹೇಳಲಿ. ನೀರು, ನಾಡಿನ ನುಡಿ, ಭಾಷೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಬೇರೆಬೇರೆಯಲ್ಲ. ನಾವು ನಾಡಿನ ನ್ಯಾಯದ ಪರ ಇರಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದಿರಿ ಎಂದು ಮನವಿ ಮಾಡಿದರು.

ಮೇಕೆದಾಟು ಯೋಜನೆಗೆ ಅನುಮತಿ ಪಡೆಯಿರಿ: ಕಾಂಗ್ರೆಸ್-ಡಿಎಂಕೆ ‘ಇಂಡಿಯ’ ಮೈತ್ರಿಕೂಟದಲ್ಲಿವೆ. ರಾಜ್ಯದ ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿನ ಜೊತೆ ಸಲೀಸಾಗಿ ಮಾತನಾಡಲು ಕಾಂಗ್ರೆಸ್ಸಿಗರಿಗೆ ಅವಕಾಶವಿದೆ. ರಾಜಕೀಯ ದೋಸ್ತಿಯನ್ನು ಸಮಸ್ಯೆ ಪರಿಹಾರಕ್ಕಾಗಿ ಬಳಸಿ. ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳಿ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News