ಬಿಟ್ ಕಾಯಿನ್ ಹಗರಣ: ತನಿಖಾಧಿಕಾರಿ ಮುಂದೆ ನಲಪಾಡ್ ಹಾಜರು

Update: 2025-02-06 21:03 IST
Photo of Mohammad Nalapad

ಮುಹಮ್ಮದ್ ನಲಪಾಡ್

  • whatsapp icon

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ, ಪ್ರಕರಣದ ಆರೋಪಿ ಮುಹಮ್ಮದ್ ನಲಪಾಡ್ ಎಸ್‍ಐಟಿ ಮುಂದೆ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಫೆ.7ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಇತ್ತೀಚಿಗೆ ನೋಟಿಸ್ ಜಾರಿಗೊಳಿಸಿತ್ತು. ವೈಯಕ್ತಿಕ ಕಾರಣ ನೀಡಿ ಗುರುವಾರವೇ ತನಿಖಾಧಿಕಾರಿಗಳ ಮುಂದೆ ನಲಪಾಡ್ ಹಾಜರಾದರು.

ಅದರಂತೆ, ಡಿವೈಎಸ್ಪಿ ಬಾಲರಾಜ್ ಅವರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ನಲಪಾಡ್ ಹೇಳಿಕೆ ದಾಖಲಿಸಿದರು. ಇನ್ನೂ, ವಿಚಾರಣೆ ಸಂದರ್ಭದಲ್ಲಿ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಪ್ರಶ್ನೆಗೆ ನಲಪಾಡ್ ಲಿಖಿತ ಉತ್ತರ ನೀಡಿದ್ದಾರೆಂದು ತಿಳಿದು ಬಂದಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಹಮ್ಮದ್ ನಲಪಾಡ್, ನಾನು ಎಲ್ಲಿಯೂ ಓಡಿಹೋಗಿಲ್ಲ. ಪ್ರಕರಣದಲ್ಲಿ ಬಂಧನವಾಗುವ ಬಗ್ಗೆ ಭಯವಿಲ್ಲ. ಆರೋಪಿ ಶ್ರೀಕಿ ಪರಿಚಯ ಕುರಿತ ತನಿಖಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ಹೇಳಿದರು.

ಶ್ರೀಕಿ ನನ್ನ ಸಹೋದರನ ಮೂಲಕ ಪರಿಚಯವಾಗಿದ್ದ. ಇದುವರೆಗೂ ನನಗೂ ಹಾಗೂ ನನ್ನ ತಮ್ಮನಿಗೂ ಶ್ರೀಕಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿಲ್ಲ. ಕಾನೂನಿನ ಮೇಲೆ ಗೌರವವಿದೆ. ಮತ್ತೆ ವಿಚಾರಣೆಗೆ ಕರೆದರೆ ಬರುವೆ ಎಂದು ಅವರು ತಿಳಿಸಿದರು.

ಏನಿದು ಬಿಟ್ ಕಾಯಿನ್ ಹಗರಣ?:

2020ರಲ್ಲಿ ಬಿಟ್ ಕಾಯಿನ್ ಹಗರಣದ ಸುಳಿವು ಸಿಕ್ಕಿ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಸೇರಿ ಐವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಆರೋಪಿಗಳು ಹಲವಾರು ವೆಬ್‍ಸೈಟ್‍ಗಳು, ಕ್ರಿಸ್ಟೋ ಕರೆನ್ಸಿ ಬದಲಾವಣೆ ಸೇರಿದಂತೆ ಹಲವು ವೆಬ್ ಹ್ಯಾಕ್ ಮಾಡಿ ಅಕ್ರಮವಾಗಿ ಕೋಟ್ಯಂತರ ರೂ. ಲಪಟಾಯಿಸಿರುವುದು ತನಿಖೆಯಲ್ಲಿ ಕಂಡು ಬಂದಿತ್ತು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜಾಲಗಳು ಪ್ರಕರಣದಲ್ಲಿ ಶಾಮೀಲಾಗಿರುವುದು, ಸೈಬರ್‍ನಲ್ಲಿ ಪರಿಣತಿ ಹೊಂದಿದ್ದ ಹಗರಣದ ಆರೋಪಿಗಳು ಡಾರ್ಕ್ ನೆಟ್‍ನಲ್ಲಿ ವ್ಯವಹಾರ ಕುದುರಿಸಿರುವುದು ಪತ್ತೆಯಾಗಿತ್ತು. 2023ರ ಜೂನ್ 30ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆ ನಡೆಸಲು ಎಸ್‍ಐಟಿ ರಚಿಸಿದ್ದರು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News