ಡಿ.ಕೆ. ಶಿವಕುಮಾರ್‌ ವಿದೇಶ ಪ್ರವಾಸಕ್ಕೆ ದಿಲ್ಲಿ ನ್ಯಾಯಾಲಯ ಅನುಮತಿ

Update: 2023-11-27 14:02 GMT

ಡಿ.ಕೆ. ಶಿವಕುಮಾರ್ 

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿದೇಶ ಪ್ರವಾಸಕ್ಕೆ ದಿಲ್ಲಿ ನ್ಯಾಯಾಲಯ ಅನುಮತಿ ನೀಡಿದೆ.

ಡಿ.ಕೆ. ಶಿವಕುಮಾರ್ ಅವರು ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ದುಬೈಗೆ ಪ್ರಯಾಣಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಡಿಕೆಶಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರು.

ದುಬೈನಲ್ಲಿ ನಡೆಯಲಿರುವ COP28 ಸ್ಥಳೀಯ ಹವಾಮಾನ ಆಕ್ಷನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗಿದೆ, ಹಾಗಾಗಿ ವಿದೇಶ ಪ್ರವಾಸಕ್ಕೆ ಅನುಮತಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದು ವಿಶ್ವಸಂಸ್ಥೆಯು ಆಯೋಜಿಸುವ ವಾರ್ಷಿಕ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆಯಾಗಿದೆ.

"ಭಾರತದ ಸಂವಿಧಾನದ 21 ನೇ ವಿಧಿಯ ಪ್ರಕಾರ ವಿದೇಶಕ್ಕೆ ಪ್ರಯಾಣಿಸುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂಬುದು ಕಾನೂನಿನ ಸ್ಥಿರವಾದ ತತ್ವವಾಗಿದೆ. ಆದಾಗ್ಯೂ, ಅಂತಹ ಹಕ್ಕು ಅನಿಯಂತ್ರಿತವಾಗಿಲ್ಲ ಮತ್ತು ಸಮಂಜಸವಾದ ನಿರ್ಬಂಧವನ್ನು ಅದರ ಮೇಲೆ ವಿಧಿಸಬಹುದು. ಆರೋಪಿಯು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಮತ್ತು ವಿಚಾರಣೆಯನ್ನು ಎದುರಿಸಲು ಅಲಭ್ಯವಾಗಬಹುದು ಎಂದು ಕಂಡುಬಂದರೆ ತನಿಖೆ ಸಮಯದಲ್ಲಿ ಈ ಹಕ್ಕನ್ನು ನಿರ್ಬಂಧಿಸಲು ವಿಧಿಸಬಹುದು” ಎಂದು ನ್ಯಾಯಾಧೀಶರು ನವೆಂಬರ್ 25 ರಂದು ನೀಡಿದ ಆದೇಶದಲ್ಲಿ ಹೇಳಿದ್ದಾರೆ.

ಆರೋಪಿಯು ಎಂಟು ಬಾರಿ ಶಾಸಕರಾಗಿದ್ದರು, ಪ್ರಸ್ತುತ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಧೀಶರು, ಅವರು ಭಾರತದಿಂದ ಪಲಾಯನ ಮಾಡುವ ಸಾಧ್ಯತೆ ತುಂಬಾ ದೂರವಿದೆ ಎಂಬುದನ್ನು ಗಮನಿಸಿ ಅನುಮತಿ ಕೊಟ್ಟಿದ್ದಾರೆ.

ಅರ್ಜಿದಾರರ ಅರ್ಜಿಯನ್ನು ಅನುಮತಿಸಲು ಯಾವುದೇ ಅಡ್ಡಿಯಿಲ್ಲ. ಆದ್ದರಿಂದ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಅನುಮತಿಸಲಾಗಿದೆ ಮತ್ತು ನವೆಂಬರ್ 29, 2023 ರಿಂದ ಡಿಸೆಂಬರ್ 3 ರವರೆಗೆ ಜಾರಿಗೆ ಬರುವಂತೆ ದುಬೈಗೆ ಪ್ರಯಾಣಿಸಲು ಅವರಿಗೆ ಅನುಮತಿ ಇದೆ ಎಂದು ನ್ಯಾಯಾಧೀಶರು ಹೇಳಿದರು.

ಆದಾಗ್ಯೂ, ನ್ಯಾಯಾಧೀಶರು ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಿದ್ದು, ಅವರು ತಮ್ಮ ಪ್ರಯಾಣದ ಮೊದಲು ನ್ಯಾಯಾಲಯದ ಮುಂದೆ ಅವರ ಹೆಸರಿನಲ್ಲಿ ರೂ. 5 ಲಕ್ಷದ ಎಫ್‌ಡಿಆರ್ ಅನ್ನು ಒದಗಿಸಬೇಕು ಮತ್ತು ಅವರ ಸಂಪೂರ್ಣ ಪ್ರಯಾಣದ ವಿವರವನ್ನು ದೂರವಾಣಿ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News