ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತದಿಂದ 100ಕ್ಕೂ ಹೆಚ್ಚು ಸಾವು: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2023-07-11 12:58 GMT

ಬೆಂಗಳೂರು, ಜು.11: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್  ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ, ಈ ರಸ್ತೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಇವುಗಳನ್ನು ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಸುರೇಶ್‍ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮಾರ್ಚ್‍ನಿಂದ ಜೂನ್ ತಿಂಗಳ ವರೆಗೆ 308 ಅವಘಾತಗಳು ಸಂಭವಿಸಿ 100 ಮಂದಿ ಮೃತಪಟ್ಟು, 335 ಜನ ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಕೆಲವು ನ್ಯೂನ್ಯತೆಗಳಿವೆ. ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ತಿರುವುಗಳಬಗ್ಗೆಯೂ ಮಾಹಿತಿ ಇಲ್ಲ. ಸೂಚನಾ ಫಲಕಗಳನ್ನು ಅಳಪಡಿಸಬೇಕಿದೆ ಎಂದರು.

ಇನ್ನೂ, ಈ ಎಲ್ಲದರ ಬಗ್ಗೆಯೂ ಲೋಕೋಪಯೋಗಿ ಸಚಿವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಇವುಗಳನ್ನು ಸರಿಪಡಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದು ಎಂದ ಅವರು, ಈ ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಇಂಟರ್ ಸೆಕ್ಟರ್ ಗಳನ್ನು ಅಳವಡಿಸಿ ವೇಗ ನಿಯಂತ್ರಣದ ಬಗ್ಗೆಯೂ ಗಮನ ನೀಡಿದ್ದೇವೆ. ಹಾಗೆಯೇ ಎಕ್ಸ್‍ಪ್ರೆಸ್ ಹೈವೆಯಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೆದ್ದಾರಿಯಲ್ಲಿ ಪಾದಚಾರಿಗಳು ಬರದಂತೆ ತಂತಿ ಬೇಲಿಗಳನ್ನು ನಿರ್ಮಾಣ ಮಾಡಲಾಗಿದ್ದು, ರಸ್ತೆ ದಾಟುವ ಸಲುವಾಗಿ ಪಾದಚಾರಿಗಳು ಅಲ್ಲಲ್ಲಿ ತಂತಿ ಬೇಲಿಗಳನ್ನು ಕಿತ್ತು ಹಾಕಿದ್ದು, ಇದನ್ನು ಸರಿಪಡಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೇಳಲಾಗಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಸುರೇಶ್‍ಕುಮಾರ್, ಈ ಹೆದ್ದಾರಿಯಲ್ಲಿ 135 ಜನ ಮೃತಪಟ್ಟಿದ್ದಾರೆ. ಸೂಚನಾ ಫಲಕಗಳು ಇಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಉಲ್ಲೇಖಿಸಿದರು.

ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ ಅವರು, ರಸ್ತೆಯಲ್ಲಿ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಹಾಗಾಗಿ ವಾಹನಗಳ ನಿಯಂತ್ರಣ ತಪ್ಪುತ್ತಿವೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು. ಆಗ, ಹೆದ್ದಾರಿಯ ನ್ಯೂನ್ಯತೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಪಾಸಣೆಯನ್ನು ಮಾಡಿಸಿದ್ದೇವೆ. ಎಲ್ಲವನ್ನು ಸರಿಪಡಿಸಿ ಅಪಘಾತ ನಿಯಂತ್ರಿಸಲಾಗುವುದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News