‘ವೀಸಾ’ ಅವಧಿ ಮುಗಿದರೂ 700ಕ್ಕೂ ಅಧಿಕ ವಿದೇಶಿಗರು ರಾಜ್ಯದಲ್ಲಿದ್ದಾರೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್

Update: 2023-07-13 16:19 GMT

ಬೆಂಗಳೂರು, ಜು.13: ವಿದೇಶಗಳಿಂದ ವ್ಯಾಸಂಗ ಸೇರಿದಂತೆ ವಿವಿಧ ಕಾರಣಕ್ಕಾಗಿ ರಾಜ್ಯಕ್ಕೆ ಬಂದಿರುವವರ ಪೈಕಿ ಮೇ ಅಂತ್ಯಕ್ಕೆ ವೀಸಾ ಮುಗಿದರೂ, 754 ವಿದೇಶಿಗರು ರಾಜ್ಯದಲ್ಲಿ ಇದ್ದಾರೆ. ಅವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ವಿದ್ಯಾರ್ಥಿ ವೀಸಾದಡಿಯಲ್ಲಿ ವಿದೇಶಗಳ 4,890 ಮಂದಿ ರಾಜ್ಯಕ್ಕೆ ಬಂದಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಅನುಮತಿ ಇಲ್ಲದೆ ನೆಲೆಸಿರುವ ವಿದೇಶಿಗರ ಮೇಲೆ ಕಣ್ಣಿಡಲು ರಾಜ್ಯದ ಆಯಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿದೆ ಎಂದರು.

ಉದ್ಯೋಗ ಸೇರಿದಂತೆ ಇತರೆ ಕೆಲಸಗಳಲ್ಲಿ 8,862 ಮಂದಿ ವಿದೇಶಿಗರು ವೀಸಾ ಪಡೆದು ರಾಜ್ಯದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಆಫ್ರಿಕಾ ದೇಶದವರಾಗಿದ್ದು, ವೀಸಾ ಮುಗಿದವರು ಸಣ್ಣ ಪುಟ್ಟ ಕಾರಣಗಳಿಗಾಗಿ ಕೇಸು ಹಾಕಿಸಿಕೊಂಡು ರಾಜ್ಯದಲ್ಲೇ ಇದ್ದಾರೆ. ಅಂತಹವರನ್ನು ಪ್ರಕರಣ ಇತ್ಯರ್ಥವಾಗದೆ ಅವರ ದೇಶಗಳಿಗೆ ಕಳುಹಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿರುವ ವಿದೇಶಿ ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ತುಮಕೂರು ದಿಬ್ಬೂರು ಬಳಿಯ ವಿದೇಶಿ ಬಂಧನ ಕೇಂದ್ರದಲ್ಲಿ ವಿದೇಶಿಗರು ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಅವರನ್ನು ಶಿವಮೊಗ್ಗದ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ವಿದೇಶಿಗರು ಮಾದಕ ವಸ್ತು ಸಾಗಾಣೆ, ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳಿದರು.

ವೀಸಾ ಅವಧಿ ಮುಗಿದಿರುವ ವಿದೇಶಿಗರನ್ನು ಅವರ ದೇಶಕ್ಕೆ ಕಳುಹಿಸುವ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ಮಾಹಿತಿ ನೀಡಿ ಅಲ್ಲಿಂದ ಅನುಮತಿ ಬಂದ ನಂತರ ಅವರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗುವುದು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News