ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಂದಕ್ಕಿಂತ ಹೆಚ್ಚಿನ ಪತ್ನಿಯರು ಪಿಂಚಣಿಗೆ ಅರ್ಹರು: ಹೈಕೋರ್ಟ್

Update: 2023-12-22 14:34 GMT

ಬೆಂಗಳೂರು: ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿದ್ದು, ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿಯು ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಮೊದಲನೇ ಪತ್ನಿ ಮತ್ತು ಆಕೆಯ ಪುತ್ರಿಯರಿಗೆ ಶೇ.50ರಷ್ಟು ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ನೈರುತ್ಯ ರೈಲ್ವೆಗೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಸಾವನ್ನಪ್ಪಿದ ರೈಲ್ವೆ ಉದ್ಯೋಗಿಯ ಎರಡನೇ ಪತ್ನಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಉದ್ಯೋಗಿಯ ಹಕ್ಕುಗಳು ಅಥವಾ ಅವರ ಕುಟುಂಬವು ಪಿಂಚಣಿ ನಿಯಮ ಅವಲಂಬಿಸಿರುತ್ತದೆ. ನಿಯಮಗಳು ಇಲ್ಲದಿದ್ದರೆ ಪಿಂಚಣಿ ಇಲ್ಲ. ಒಂದೊಮ್ಮೆ ನಿಯಮಗಳು ಇದ್ದರೆ ಪಿಂಚಣಿಯನ್ನು ನಿಯಮದ ಪ್ರಕಾರ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಪ್ರಕರಣವೇನು?: ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕರ ಕಚೇರಿಯಲ್ಲಿ ಸಂಚಾರ ವಿಭಾಗದಲ್ಲಿ ಆರ್.ರಮೇಶ್ ಬಾಬು ಎಂಬವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಯೊಂದಿಗಿನ ವಿವಾಹದಲ್ಲಿ ಬಾಬು ಅವರಿಗೆ ಮೂವರು ಪುತ್ರಿಯರಿದ್ದಾರೆ. 1999ರ ಡಿ.9ರಂದು ಬಾಬು ಅವರು ಪುಷ್ಪಾ ಅವರೊಂದಿಗೆ ತಿರುಪತಿಯಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದರು.

ಈ ಸಂಬಂಧದಲ್ಲಿ ಅವರಿಗೆ 22 ವರ್ಷದ ಪುತ್ರಿ ಇದ್ದಾರೆ. 2021ರ ಮೇ 4ರಂದು ಬಾಬು ನಿಧನರಾಗಿದ್ದು, ಮೊದಲ ಪತ್ನಿಯು ರೈಲ್ವೆಯಿಂದ ಬಾಬು ಅವರಿಗೆ ಬರಬೇಕಾದ ಸೌಲಭ್ಯ ಮತ್ತು ಪಿಂಚಣಿ ಕೋರಿದ್ದರು. ಅಲ್ಲದೇ, ಎರಡನೇ ಪುತ್ರಿಗೆ ಅನುಕಂಪದ ಉದ್ಯೋಗ ಬಯಸಿ ಮನವಿ ಸಲ್ಲಿಸಿದ್ದರು.

ಈ ನಡುವೆ ಎರಡನೇ ಪತ್ನಿಯು ತಾನು ಸೌಲಭ್ಯಕ್ಕೆ ಅರ್ಹರಾಗಿರುವುದಾಗಿ ತಿಳಿಸಿರುವುದರಿಂದ ಸೌಲಭ್ಯಗಳನ್ನು ಪಾವತಿಸಲು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಪಕ್ಷಕಾರರ ಸ್ಥಿತಿಗತಿಗೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯದ ಆದೇಶದ ಬಳಿಕ ಸೌಲಭ್ಯ ಪಾವತಿ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ಮಂಡಳಿ ಮೊದಲ ಪತ್ನಿಗೆ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನಾತ್ಮಕವಾಗಿ ತಾನು ಮೊದಲ ಪತ್ನಿಯಾಗಿರುವುದರಿಂದ ಸೌಲಭ್ಯ, ಅನುಕಂಪದ ಉದ್ಯೋಗ ಮತ್ತು ಬಾಕಿಗಳನ್ನು ಪಾವತಿಸಲು ನೈರುತ್ಯ ರೈಲ್ವೆ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಇದಕ್ಕೆ ಪೂರಕವಾಗಿ ಎರಡನೇ ಪತ್ನಿ ಮೆಮೊ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು 2022ರ ಜುಲೈ 22ರಂದು ಮೊದಲ ಪತ್ನಿ ಹಾಗೂ ಅವರ ಮಕ್ಕಳಿಗೆ ಶೇ. 50ರಷ್ಟು ಪಿಂಚಣಿ ಪಾವತಿಸಲು ನೈರುತ್ವ ರೈಲ್ವೆ ಮಂಡಳಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಎರಡನೇ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News