ಸೋತು ಸುಣ್ಣವಾದರೂ ನಮ್ಮ ಪಕ್ಷದ ನಾಯಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ: ಎಂ.ಪಿ.ರೇಣುಕಾಚಾರ್ಯ ಆಕ್ರೋಶ

Update: 2023-06-27 15:18 GMT

ಹೊನ್ನಾಳಿ : ನಮ್ಮ ಸರಕಾರದ ತಪ್ಪು ನಿರ್ಧಾರಗಳಿಂದ ಚುನಾವಣೆಯಲ್ಲಿ ನಾವುಗಳು ಸೋಲಬೇಕಾಯಿತು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. 

ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಪಕ್ಷದ ಮುಖಂಡರ ವಿರುದ್ದವೇ ಹರಿಹಾಯ್ದರು.

ಪ್ರಪ್ರಥಮವಾಗಿ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ.ಗಾದಿಯಿಂದ ಇಳಿಸಿದ್ದು ರಾಜ್ಯದ ಎಲ್ಲಾ ವರ್ಗದವರು ನಮ್ಮ ಪಕ್ಷದ ಬಗ್ಗೆ ಬೇಸರವಾಗಿದ್ದರು. ಒಬ್ಬ ಸ್ವಾಮೀಜಿಯವರು ಸಹ ಹೇಳಿದ್ದರು, ಬಿಎಸ್‌ವೈ ಅವರನ್ನು ಸಿಎಂ.ಕುರ್ಚಿಯಿಂದ ಇಳಿಸಿದ್ದಿರಿ ಅವರ ಕಣ್ಣೀರಿನಲ್ಲಿ ಪಕ್ಷವೂ ಕೊಚ್ಚಿ ಹೋಗಲಿದೆ ಎಂದು ಅದರಂತೆ ನಮ್ಮ ಪಕ್ಷ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಗೆ ತನ್ನಿ ಎಂದು ಯಾರೂ ಕೇಳಿರಲಿಲ್ಲ,ಮೀಸಲಾತಿ ವಿಚಾರಕ್ಕೆ ಈಗ ಕೈಹಾಕಬೇಡಿ ಎಂದರೂ ಸಹ ಕೇಳದೆ ಒಳ ಮೀಸಲಾತಿ ಜಾರಿಗೆ ತಂದರು,ಇದರ ಪರಿಣಾಮ ನಮ್ಮ ಸೋಲಿಗೆ ಮುಳುವಾಯಿತು ಎಂದರು.

ಸೋತು ಸುಣ್ಣವಾದರೂ ಇನ್ನೂ ನಮ್ಮ ಪಕ್ಷದ ನಾಯಕರುಗಳು ಬುದ್ದಿ ಕಲಿತಂತೆ ಕಾಣುತ್ತಿಲ್ಲ ಎಂದ ಮಾಜಿ ಶಾಸಕ, ಇನ್ನೂ ವಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಆಗುತ್ತಿಲ್ಲ,ಜೊತೆಗೆ ನಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳುತ್ತಾರೆ ಮತ್ತೊಮ್ಮೆ ರಾಜೀನಾಮೆ ನೀಡಿಲ್ಲ ಎಂದು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋತು ಸುಣ್ಣವಾಗಿದ್ದರೂ ಬಿಜೆಪಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ರಾಜ್ಯದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಹತ್ತು ಕೆಜಿ ಕೊಡುವ ಅಕ್ಕಿಯಲ್ಲೂ ಕಡಿತ ಮಾಡಿದರು.ಎನ್‌ಪಿಎಸ್ ಮನವಿಯನ್ನು ಸ್ವೀಕಾರ ಮಾಡಿ, ಒಪಿಎಸ್ ಜಾರಿಗೆ ತನ್ನಿ ಎಂದು ಮನವಿ ಮಾಡಿದ್ದರೂ ಸಹ ಕೇಳಲಿಲ್ಲ,ಶೆಟ್ಟರ್ ಹಾಗೂ ಈಶ್ವರಪ್ಪ ಸೆರಿದಂತೆ ಅನೇಕ ನಾಯಕರಿಗೆ ಟಿಕೆಟ್ ತಪ್ಪಿದ್ದು ಬಿಜೆಪಿ ಸೋಲಿಗೆ ಇದು ಒಂದು ಕಾರಣ ಎಂದರು.

ಕಾಂಗ್ರೆಸ್ ನಾಯಕರು ಚುನಾವಣೆಗೂ ಮುಂಚೆಯೇ ಪ್ರಣಾಳಿಕೆ ಬಿಡುಗಡೆ ಮಾಡಿ ಅದರ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು, ಅದರೆ ನಮ್ಮ ಪಕ್ಷದ ನಾಯಕರುಗಳು ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಚುನಾವಣೆ ಸಮೀಪದಲ್ಲಿ, ಹೀಗೆ ಅನೇಕ ಗೊಂದಲಗಳ ನಡುವೆ ನಾವುಗಳು ಚುನಾವಣೆ ಎದುರಿಸಿದ್ದರಿಂದ ನಾವು ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಸ್ವಪಕ್ಷದವರ ವಿರುದ್ದ ಕಿಡಿ ಕಾರಿದರು.

ಕರ್ನಾಟಕದ ರಾಜಕಾರಣವೇ ಬೇರೆ, ಗುಜರಾತ್ ಮಾದರಿಯಲ್ಲಿ 72 ಹೊಸ ಮುಖಗಳಿಗೆ ಟಿಕೆಟ್ ನಿಡಿದ್ದರಿಂದ ನಮಗೆ ಸೋಲುಂಟಾಯಿತು,ಕರ್ನಾಟಕದಲ್ಲಿ ಜಾತಿ ಸಮೀಕರಣವೇ ಮುಖ್ಯ,ಇದರ ಹಿನ್ನಲೆಯಲ್ಲಿ ಟಿಕೆಟ್ ಹಂಚಿಕೆಯಾಗಬೇಕಿತ್ತು ಎಂದು ತಮ್ಮ ಪಕ್ಷದ ನಾಯಕರ ವಿರುದ್ದ ಗುಡುಗಿದರು.

ಕಾಂಗ್ರೆಸ್ ಸರಕಾರ ಅಧಿಕರಕ್ಕೆ ಬಂದ ತಕ್ಷಣ 34 ಸಚಿವ ಸ್ಥಾನವನ್ನು ಒಂದೇ ಬಾರಿಗೆ ತುಂಬಿದರು. ಆದರೆ ನಮ್ಮ ಸರಕಾರದಲ್ಲಿ ಇನ್ನೂ ಆರು ಸಚಿವ ಸ್ಥಾನ ಖಾಲಿ ಇದ್ದರೂ ಯಾರಿಗೂ ಕೊಡಲಿಲ್ಲ,ನನಗೇ ಕೊಡಿ ಎಂದು ಕೇಳಿರಲಿಲ್ಲ,ಯಾರಿಗಾದರೂ ಸರಿ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇವು ಎಂದು ನಾಯಕರ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.

ನಾನೂ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ:  ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಲು ಎಲ್ಲರೂ ಸಮರ್ಥರಿದ್ದಾರೆ,ಅವರಂತೆ ನಾನೂ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ,ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದರು.

ನಾನೂ ಕೂಡ ಎಂ.ಪಿ.ಚುನಾವಣೆಗೆ ಪ್ರಬಲ ಆಕಾಂಕ್ಷಿ :-ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನತೆ ಸೇರಿದಂತೆ ಜಿಲ್ಲೆಯ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನನಗೆ ಕರೆ ಮಾಡಿ ಲೋಕಸಭಾ ಅಭ್ಯರ್ಥಿಯಾಗಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದಾರೆ,ಈ ಬಗ್ಗೆ ಎಲ್ಲಾ ಸಾಧಕಭಾಧಕಗಳನ್ನು ಯೋಚಿಸಿ ನಿರ್ಧಾರ ಮಾಡಿದ್ದೇನೆ, ನಾನೂ ಕೂಡ ಎಂ.ಪಿ.ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ ಅವರು ಸಹ ನನಗೆ ದೂರವಾಣಿ ಕರೆ ಮಾಡಿದ್ದರು, ಅವರಿಗೂ ಹೇಳಿದ್ದೇನೆ,ಪಕ್ಷ ಕೊಟ್ಟರೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News