ಮುಡಾ ಪ್ರಕರಣ | ತನಿಖೆಗೆ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜ.25ಕ್ಕೆ ಮುಂದೂಡಿಕೆ

Update: 2024-12-05 13:07 IST
Photo of  CM Siddaramaiah

ಸಿಎಂ ಸಿದ್ದರಾಮಯ್ಯ

  • whatsapp icon

ಬೆಂಗಳೂರು : ಮುಡಾ ಪ್ರಕರಣದ ತನಿಖೆಗೆ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ರಾಜ್ಯಪಾಲರ ಕಚೇರಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ದೇವರಾಜು ಪರ ವಕೀಲರು ವಾದ ಆರಂಭಿಸಿ, ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸಿಬಿಐ ತನಿಖೆ ಕೋರಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಆ ಅರ್ಜಿಯ ವಿಚಾರಣೆಯನ್ನೂ ಮುಂದೂಡಬೇಕು. ನಮ್ಮ ಕಕ್ಷಿದಾರರಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ವಿಚಾರಣೆಗೆ ಒಳಪಡಬೇಕಾಗಿದೆ. ಹೀಗಾಗಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದೇವೆ. ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಲೋಕಾಯುಕ್ತ ಪೊಲೀಸರ ತನಿಖೆ ಸ್ಥಿತಿಗತಿ ವರದಿ ಕೇಳಿದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ವಕೀಲ ದುಷ್ಯಂತ್ ದವೆ ಮನವಿ ಮಾಡಿದರು.

ಬಳಿಕ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಕೀಲ ಕೆ.ಜಿ ರಾಘವನ್ ವಾದ ಮಂಡಿಸಿ, ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ನೋಟಿಸ್ ಜಾರಿಗೊಳಿಸಿದೆ. ಅಲ್ಲಿನ ವಿಚಾರಣೆಗೂ ಈ ಕೇಸ್ ಗೂ ಸಂಬಂಧವಿಲ್ಲ ಎಂದರು.

ನಂತರ ವಾದ ಮಂಡಿಸಿದ ದೇವರಾಜು ಪರ ವಕೀಲ ದುಷ್ಯಂತ್ ದವೆ, ರಾಜ್ಯಪಾಲರ ಅನುಮತಿ ಸರಿಯೋ ತಪ್ಪೋ ಎಂದಷ್ಟೇ ಹೇಳಬೇಕಿತ್ತು. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ದೇವರಾಜು ವಿರುದ್ಧ ಆದೇಶ ನೀಡಿದೆ. ದೇವರಾಜು ವಾದ ಆಲಿಸದೇ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ತೊಂದರೆ ಆಗುತ್ತಿರುವುದರಿಂದ ಪ್ರಶ್ನಿಸಿದ್ದೇವೆ. ದೇವರಾಜು ಜಮೀನಿನ ಮೂಲ ಮಾಲೀಕರಾಗಿದ್ದರು. ಪ್ರಕ್ರಿಯೆ ಪಾಲಿಸಿಯೇ ಡಿನೋಟಿಫಿಕೇಷನ್ ಮಾಡಲಾಗಿದೆ. ಹಲವರ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದೆ. ಅದರಲ್ಲಿ ದೇವರಾಜು ಜಮೀನನ್ನೂ ಡಿನೋಟಿಫಿಕೇಷನ್ ಮಾಡಲಾಗಿದೆ. ಆದರೆ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಸಿವಿಲ್ ಕೋರ್ಟ್ ನಲ್ಲಿ ಪರಿಹಾರದ ಹಣ ಠೇವಣಿ ಮಾಡಲಾಗಿದೆ. ಆದರೆ 3.16 ಎಕರೆ ಜಮೀನಿಗೆ ಪ್ರತ್ಯೇಕವಾಗಿ ಪರಿಹಾರ ಠೇವಣಿ ಇಟ್ಟಿರಲಿಲ್ಲ. ಜಮೀನು ಡಿನೋಟಿಫಿಕೇಷನ್ ಆದಾಗ ಜಮೀನಿನ ಮೌಲ್ಯ 3 ಲಕ್ಷ ರೂ. ಇತ್ತು. ಈಗ 56 ಕೋಟಿ ರೂ. ಆಗಿದೆ ಎಂದು ಹೈಕೋರ್ಟ್ ಆದೇಶದಲ್ಲಿದೆ. ಆದರೆ ಇದಕ್ಕೂ ದೇವರಾಜುಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದಲ್ಲಿ ಡಿನೋಟಿಫಿಕೇಷನ್ ವಿಚಾರ ಹೊಸದಲ್ಲ. ರೈತರು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದಾಗ ಸರ್ಕಾರ ಪರಿಗಣಿಸುತ್ತದೆ. 1998 ರಲ್ಲಿ ಏನಾಯಿತು ಎಂಬುದನ್ನು 2024 ರಲ್ಲಿ ತೀರ್ಮಾನಿಸಲಾಗುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ, ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನೀವು ಏಕಸದಸ್ಯ ಪೀಠಕ್ಕೆ ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ದೇವರಾಜುಗೆ ಈಗ 80 ವರ್ಷ, ಈಗ ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸಲು ಸಾಧ್ಯವಿಲ್ಲ. ಏಕಸದಸ್ಯ ಪೀಠದ ಆದೇಶದಿಂದ ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸುವಂತಾಗಿದೆ ಎಂದು ದುಷ್ಯಂತ್ ದವೆ ವಾದ ಮಂಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ನೇಹಮಯಿ ಪರ ವಕೀಲರು, ಸಿಬಿಐ ಪ್ರಕರಣ ಕೋರಿರುವ ಅರ್ಜಿಯಲ್ಲಿ ಕೇವಲ ನೋಟಿಸ್ ಜಾರಿಯಾಗಿದೆ. ಯಾರ ವಿರುದ್ಧ ತನಿಖೆಯಾಗಬೇಕೆಂದು ಹೈಕೋರ್ಟ್ ತೀರ್ಮಾನಿಸಿಲ್ಲ. ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ನೋಟಿಸ್ ನೀಡಿದೆ. ಹೀಗಾಗಿ ಇವರ ಮೇಲ್ಮನವಿ ಸೂಕ್ತವಲ್ಲ ಎಂದು ವಾದ ಮಂಡಿಸಿದರು.

ಹೈಕೋರ್ಟ್ ಏಕಸದಸ್ಯ ಪೀಠದ ವಿಚಾರಣೆಯಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಇದಾದ ಬಳಿಕವೂ ವಾದ ಮುಂದುವರೆಸಿದ ದೇವರಾಜು ಪರ ವಕೀಲರು, ಸಿಬಿಐ ತನಿಖೆ ಕೋರಿರುವ ಅರ್ಜಿ ದುರುದ್ದೇಶಪೂರಿತವಾಗಿದೆ ಎಂದರು. ಇದಕ್ಕೂ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ವಿಚಾರಣೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಮ್ಮ ಅಭಿಪ್ರಾಯದಿಂದ ವಿಚಾರಣೆ ಮೇಲೆ ಪರಿಣಾಮವಾಗಬಹುದು ಎಂದಿತು.

ಇದಾದ ನಂತರ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ವಾದ ಆರಂಭಿಸಿ, ಏಕಸದಸ್ಯ ಪೀಠದ ಆದೇಶದಲ್ಲಿನ ಲೋಪ ತೋರಿಸುತ್ತೇನೆ. 17 ಎ ನಿಯಮವನ್ನು ಸಂಪೂರ್ಣವಾಗಿ ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಪೊಲೀಸ್ ಅಧಿಕಾರಿ ಮೂಲಕವೇ ಅನುಮತಿ ಕೋರಬೇಕು. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ಇದನ್ನು ನಿರ್ಲಕ್ಷಿಸಿದೆ. ರಾಜ್ಯಪಾಲರು ಕ್ಯಾಬಿನೆಟ್‌ನ ಸಲಹೆ ಸೂಚನೆ ಪಾಲಿಸಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಹೈಕೋರ್ಟ್ ರಾಜ್ಯಪಾಲರ ಅನುಮತಿಯನ್ನು ಎತ್ತಿಹಿಡಿದಿದೆ. ಮುಖ್ಯಮಂತ್ರಿ ಪರವಾಗಿಯೇ ಸಚಿವ ಸಂಪುಟ ಇರುತ್ತದೆಂದು ತೀರ್ಪು ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದ ಈ ತೀರ್ಪು ಪ್ರಶ್ನಿಸಿದ್ದೇವೆ. ಹೀಗಾಗಿ ಸಿಬಿಐ ತನಿಖೆ ಕೋರಿರುವ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು. ಏಕಸದಸ್ಯ ಪೀಠದಲ್ಲಿರುವ ಡಿ.10 ರ ವಿಚಾರಣೆ ಮುಂದೂಡಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ, ಪ್ರತಿವಾದಿಗಳಿಗೆ ನೋಟಿಸ್ ನೀಡದೇ ವಾದ ಆಲಿಸಲು ಸಾಧ್ಯವಿಲ್ಲ ಎಂದರು.

ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡುವಂತೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.

ಬಳಿಕ ರಾಜ್ಯ ಸರಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಮುಖ್ಯಮಂತ್ರಿಯನ್ನು ರಾಜ್ಯಪಾಲರು ಆಯ್ಕೆ ಮಾಡಿಲ್ಲ. ಹೀಗಾಗಿ ರಾಜ್ಯಪಾಲರಿಗೆ ತನಿಖೆಗೆ ಅನುಮತಿ ನೀಡುವ ಅಧಿಕಾರವಿಲ್ಲ. ಸಾಂವಿಧಾನಿಕ ಪ್ರಶ್ನೆಗಳಿಗೆ ಹೈಕೋರ್ಟ್ ಉತ್ತರಿಸಬೇಕಿದೆ. ಅನುಮತಿ ನೀಡಬೇಕೆಂದರೆ ಏನಾದರೂ ಬಾಕಿ ಇರಬೇಕು. ಸರ್ಕಾರಿ ಅಧಿಕಾರಿಗಳಿಗಾದರೆ ನೇಮಕಗೊಳಿಸಿದವರು ಅನುಮತಿ ನೀಡಬಹುದು. ರಾಜ್ಯಪಾಲರಿಗೆ ಅನುಮತಿ ನೀಡುವ ಅಧಿಕಾರವಿಲ್ಲ. ಈ ರೀತಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಬಾರದು. ಹೀಗೆ ಮಾಡಿದರೆ ರಾಷ್ಟ್ರದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು‌.ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನ ಜನವರಿ 25ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News