ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಸಿಗದ ಅವಕಾಶ : ಪ್ರತಿಪಕ್ಷಗಳಿಂದ ರಾಜ್ಯಪಾಲರಿಗೆ ದೂರು

Update: 2024-07-25 14:22 GMT

PC : x/@BYVijayendra

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.

ಗುರುವಾರ ವಿಧಾನಮಂಡಲದ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಸಭೆಯಿಂದ ರಾಜಭವನದ ವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ತೆರಳಿದರು.

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮುಂದಿನ ದಿನಗಳಲ್ಲಿ ನಡೆಸಲಿರುವ ಹೋರಾಟದ ಕುರಿತು ನಾವು ಮತ್ತು ಜೆಡಿಎಸ್ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‍ನವರು ಈ.ಡಿ. ವಿರುದ್ಧ ಧರಣಿ ನಡೆಸಿದರು. ಅಲ್ಲದೆ, ಈ.ಡಿ. ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಬೆದರಿಸುವ ತಂತ್ರಗಾರಿಕೆ ಮಾಡಿದ್ದಾರೆ. ಹೈಕೋರ್ಟ್ ಈ.ಡಿ. ಅಧಿಕಾರಿಗಳ ವಿರುದ್ಧದ ಎಫ್‍ಐಆರ್ ಗೆ ತಡೆಯಾಜ್ಞೆ ಕೊಟ್ಟಿದೆ ಎಂದು ಅವರು ಹೇಳಿದರು.

ವಾಲ್ಮೀಕಿ ಹಗರಣ ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಮುಖ್ಯಮಂತ್ರಿ ಹೆದರಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿಸ್ತೃತ ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂದು ನಿರೀಕ್ಷೆಯಲಿದ್ದೆವು. ಆದರೆ, ಅವರು ಪಲಾಯನವಾದ ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.

ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕು, ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂಬ ಒತ್ತಾಯವನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ. ರಾಜ್ಯಪಾಲರು ನಿನ್ನೆ ಮುಖ್ಯಮಂತ್ರಿಯನ್ನು ಕರೆದು ಚರ್ಚೆ ಮಾಡಿದ್ದಾರೆ. ಮುಡಾ ಹಗರಣದ ಕುರಿತು ಕೆಲವು ವಿವರಣೆಯನ್ನೂ ಮುಖ್ಯಮಂತ್ರಿಗೆ ಕೇಳಿದ್ದಾರೆ. ನಾವು ಕಾದು ನೋಡಲಿದ್ದೇವೆ ಎಂದು ಅವರು ಹೇಳಿದರು.

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈ ಸರಕಾರವು ಬೃಹತ್ ಹಗರಣಗಳಲ್ಲಿ ಪಾಲ್ಗೊಂಡಿರುವುದು ಜಗಜ್ಜಾಹೀರಾಗಿದೆ. ಇತಿಹಾಸದಲ್ಲಿ ಯಾವುದೇ ಸದನದಲ್ಲೂ ಆಡಳಿತ ಪಕ್ಷಕ್ಕೆ ಈ ರೀತಿಯ ಅವಮಾನ ಆಗಿಲ್ಲ. ಮುಖ್ಯಮಂತ್ರಿಗಳೇ ಲೂಟಿ ಮಾಡಿದ 2 ಹಗರಣಗಳು ಚರ್ಚೆಗೆ ಬಂದಿವೆ ಎಂದರು.

3 ರಿಂದ 4 ಸಾವಿರ ಕೋಟಿ ರೂ.ಗಳ ಮುಡಾ ಹಗರಣ, 187 ಕೋಟಿ ರೂ.ಗಳ ವಾಲ್ಮೀಕಿ ನಿಗಮದ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಹಿಂದೆ ಡಿಸಿಎಂ ಆಗಿದ್ದಾಗ ಮುಡಾ ಹಗರಣ ಆರಂಭವಾಗಿತ್ತು. ಸಿಎಂ ಪತ್ನಿಗೆ 14 ನಿವೇಶನ, ಇವರ ಬೆಂಬಲಿಗರಿಗೆ ನೂರಾರು ನಿವೇಶನ ಹಂಚಿ ಲೂಟಿ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಸದನದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಸ್ಪೀಕರ್ ಕೂಡ ಕಾಂಗ್ರೆಸ್ ಕಡೆ ವಾಲಿದ್ದಾರೆ. ಮುಖ್ಯಮಂತ್ರಿ ಒಂದು ಕ್ಷಣವೂ ಆ ಸ್ಥಾನದಲ್ಲಿರುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದೇವೆ. ಅದೇ ರೀತಿ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಎಂದು ಅಶೋಕ್ ತಿಳಿಸಿದರು.

ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಜು.28 ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು. ಪಾದಯಾತ್ರೆಯ ರೂಪುರೇಷೆ, ಸ್ವರೂಪದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಜೆಡಿಎಸ್ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುವುದು.

-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ

‘ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಧಾರ ರಹಿತ ಅರೋಪಗಳನ್ನು ಮಾಡುತ್ತಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ವಿಚಾರಣಾ ಆಯೋಗಕ್ಕೆ ನೀಡಲಿ. ಅರಸು ಟ್ರಕ್ ಟರ್ಮಿನಲ್, ಪ್ರಜ್ವಲ್ ರೇವಣ್ಣ, ಈ.ಡಿ ಅಧಿಕಾರಿಗಳಿಂದ ನಡೆದಿರುವ ಬಂಧನಗಳು, ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆಗಿರುವ ಅನ್ಯಾಯ, ಅತಿವೃಷ್ಟಿ ಮೊದಲಾದ ವಿಷಯಗಳ ಮೇಲೆ ಚರ್ಚೆ ನಡೆಯಬೇಕಿತ್ತು. ವಿಪಕ್ಷಗಳ ಸದಸ್ಯರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಗರಣದ ಆರೋಪದಲ್ಲಿ ಬಿಜೆಪಿಯ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರು ಜೈಲಿಗೆ ಹೋಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ ಇದ್ಯಾವುದರ ಬಗ್ಗೆಯೂ ವಿಪಕ್ಷಗಳು ತುಟಿ ಬಿಚ್ಚುತ್ತಿಲ್ಲ’

-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News