ಮುಡಾ ಪ್ರಕರಣ | ನಿವೇಶನ​ ಪಡೆದ ಬಿಜೆಪಿ-ಜೆಡಿಎಸ್​ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಸಚಿವ ಬೈರತಿ ಸುರೇಶ್

Update: 2024-07-26 15:58 GMT

ಬೆಂಗಳೂರು : ಮುಡಾ ಹಗರಣದ ಪ್ರಕರಣವೂ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಬಿಡುಗಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಅವರು, ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಮುಖವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಹಾಗೂ ಸಿ.ಎನ್.ಮಂಜೇಗೌಡ, ಎಚ್.ವಿಶ್ವನಾಥ್ ಅವರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ ಎಂದು ಅವರು ದೂರಿದರು.

ಬಿಡುಗಡೆಗೊಂಡ ಪಟ್ಟಿ ಪ್ರಕಾರ, ಎಚ್.ಡಿ.ಕುಮಾರಸ್ವಾಮಿ ಅವರು ಇಂಡಸ್ಟ್ರಿಯಲ್ ಸಬರ್ಬ್ ಮೂರನೆ ಹಂತ ಮೈಸೂರು ವ್ಯಾಪ್ತಿಯಲ್ಲಿ 21 ಸಾವಿರ ಚದರ ಅಡಿ ಕೈಗಾರಿಕಾ ನಿವೇಶನ ಸಂಖ್ಯೆ 17/ಬಿ1 ಪಡೆದಿದ್ದಾರೆ ಎನ್ನಲಾಗಿದೆ. ಅದೇ ರೀತಿ, ಜೆಡಿಎಸ್ ಮಾಜಿ ಶಾಸಕ ಸಾ.ರಾ.ಮಹೇಶ್(ಜೆಡಿಎಸ್) ಮಳಲವಾಡಿ ಸರ್ವೆ ನಂಬರ್ 7/11 ರಲ್ಲಿ 011 ಗುಂಟೆ ಜಮೀನು ಬೋಗಾದಿ ಸರ್ವೆ ನಂಬರ್ 170,171,173 ರಲ್ಲಿ 2-11 ಎಕರೆ ಜಮೀನು ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೆಗೌಡ ಅವರು ಈರನಗೆರೆ ಬಳಿಯ 14/1 ರಲ್ಲಿ 2-25 ಎಕರೆ, ಮಾದಗಳ್ಳಿ 17 ರಲ್ಲಿ 1 ಎಕರೆ ಪಡೆದರೆ, ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಸಿ.ಎನ್.ಮಂಜೇಗೌಡ ಅವರು ಹಿನಕಲ್ ಗ್ರಾಮ ಸರ್ವೆ ನಂ 337 ರಲ್ಲಿ1 ಎಕರೆ ದೇವನೂರು ಸರ್ವ ನಂಬರ್ 91 ರಲ್ಲಿ 2-25 ಎಕರೆ, ಕೆಸರೆ ಸರ್ವೆ ನಂಬರ್ 450 ರಲ್ಲಿ 4-15 ಎಕರೆ ಜಮೀನು, ಮೈಸೂರು ಸರ್ವೆ ನಂಬರ್ 86 ರಲ್ಲಿ 7-08 ಎಕರೆ ಜಮೀನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಬೆಲವತ್ತ ಸರ್ವೆ ನಂಬರ್ 32 ರಲ್ಲಿ 0-05 ಜಮೀನು ಪಡೆದರೆ, ಬಿಜೆಪಿ ನಾಯಕ ಮಹದೇವಸ್ವಾಮಿ (ಬಿಜೆಪಿ): 255/1, 257 ರಲ್ಲಿ 0-34 ಗುಂಟೆ ಜಮೀನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News