ಬೇಲೂರಿನಲ್ಲಿ ನೂರಾರು ಮರಗಳ ಮಾರಣ ಹೋಮ: ಕಾಡುಗಳ್ಳರ ಪತ್ತೆಗೆ ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದ ಸರ್ವೇ ನಂಬರ್ 16 ಸರ್ಕಾರಿ ಭೂಮಿಯಲ್ಲಿದ್ದ 300ಕ್ಕೂ ಹೆಚ್ಚು ಬೆಲೆಬಾಳುವ ಮರಗಳ ಮಾರಣ ಹೋಮ ನಡೆದಿದೆ. ಈ ಸಂಬಂಧ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕಿದ್ದ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಬೇಲೂರು ತಾಲೂಕಿನ ವಲಯ ಅರಣ್ಯಾಧಿಕಾರಿಗಳು ಕಾಡುಗಳ್ಳರ ಜೊತೆ ಶಾಮೀಲಾಗಿರುವ ಶಂಕೆ ಇದೆ. ಆದ್ದರಿಂದ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ಒತ್ತಾಯಿಸಿದೆ.
ಈ ಬಗ್ಗೆ ಅರಣ್ಯ ಸಚಿವರಿಗೆ ಪತ್ರ ಬರೆದಿರುವ ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಹಂದ್ರಾಳ್ ನಾಗಭೂಷಣ್ ಮತ್ತು ಕುಣಿಗಲ್ ನರಸಿಂಹಮೂರ್ತಿ, ಲೋಕೇಶ್ ಬಿ.ಎಸ್. ಹಾಗೂ ಜಗದೀಶ್ ಟಿ. ಅವರು, ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಇಲಾಖೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಪ್ರಕೃತಿ ಸಹಜವಾಗಿ ಅಥವಾ ಅರಣ್ಯ ಇಲಾಖೆಯ ನೆಟ್ಟಿರುವ ಬೆಳೆದು ನಿಂತಿರುವ ಸಾಗುವಾನಿ, ಹೊನ್ನೇ, ಬೀಟೆ, ಹಲಸು ಇತ್ಯಾದಿ ಬೆಲೆ ಬಾಳುವ ಮರಗಳನ್ನು ಕಾಡುಗಳರು ಕಡಿದು ಸಾಗಿಸುವ ಪ್ರಯತ್ನ ಮಾಡಿರುತ್ತಾರೆ. ಈ ಬಗ್ಗೆ ವಿಷಯ ತಿಳಿದ ತಕ್ಷಣ ಬೇಲೂರು ತಹಶೀಲ್ದಾರ್ ಮಮತಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಯಾವುದೇ ರೀತಿಯ ಸ್ಪಂದನ ಮಾಡದೆ ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅರಣ್ಯವನ್ನು ಉಳಿಸಬೇಕಾದ ಬೆಳೆಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಅಧಿಕಾರಿಗಳ ಕೆಲಸವನ್ನು ಕಂದಾಯ ಇಲಾಖೆಯಲ್ಲಿರುವ ತಹಶೀಲ್ದಾರ್ ಮಾಡಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದಲ್ಲಿ ಹಕ್ಕು ಪತ್ರ ನೀಡಲೆಂದು ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ತೆರಳಿದಾಗ ಮಾಹಿತಿ ಪಡೆದ ತಹಸಿಲ್ದಾರ್ ಮಮತಾ ರವರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿರುತ್ತಾರೆ ಎಂಬ ಮಾಹಿತಿ ಇದೆ. ಆದರೆ ಯಾವುದಕ್ಕೂ ಕೇರ್ ಮಾಡದ ಅರಣ್ಯ ಅಧಿಕಾರಿಗಳು ಕಾಡುಗಳ್ಳರ ಜೊತೆ ಒಳ ಒಪ್ಪಂದ ಮಾಡಿರುವ ಶಂಕೆ ಇದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮರಗಳ್ಳರ ವಿರುದ್ಧ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕ್ರಮಕ್ಕೆ ಮುಂದಾಗದ ಅರಣ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನೈಜ ಹೋರಾಟಗಾರರ ವೇದಿಕೆ ಮುಖಂಡರು ಸಚಿವರನ್ನು ಒತ್ತಾಯಿಸಿದ್ದಾರೆ.