ಮೈಸೂರು: ದಸರಾ ಆಚರಣೆ ವಿರೋಧಿಸಿ ಹೆದ್ದಾರಿ ತಡೆಗೆ ಮುಂದಾದ ರೈತರು ಪೊಲೀಸ್‌ ವಶಕ್ಕೆ

Update: 2023-10-24 05:32 GMT

ಮೈಸೂರು,24: ದಸರಾ ಆಚರಣೆ ವಿರೋಧಿಸಿ ಕರಾಳ ದಸರಾ ಆಚರಿಸಿ ಹೆದ್ದಾರಿ ತಡೆಗೆ ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮಂಗಳವಾರ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಲಂಬಿಯ ಏಷಿಯಾ ಆಸ್ಪತ್ರೆ ಮುಂಭಾಗ ಹೆದ್ದಾರಿ ತಡೆಗೆ ಮುಂದಾದ ರೈತರನ್ನು ಮುನ್ನೆಚ್ವರಿಕೆ ಕ್ರಮವಾಗಿ ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಯಿತು.

ಇದೇ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, ʼರಾಜ್ಯದಲ್ಲಿ ಬರ ಆವತಿಸಿದ್ದರೂ ಸರ್ಕಾರದ ಮಂತ್ರಿಗಳು ದಸರಾ ಆಚರಣೆ ಮೂಲಕ ಮೋಜು ಮಸ್ತಿಗರ ಇಳಿದಿದ್ದಾರೆ.‌ದಸರಾ ಎಂದರೆ ಸಂತೃಪ್ತಿ, ಸಂಭ್ರಮದಿಂದ ಕೂಡಿರಬೇಕು, ಆದರೆ ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಅದ್ದೂರಿ ದಸರಾ ಆಚರಣೆಗೆ ಮುಂದಾಗಿರಿವುದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼರೈತರನ್ನು ಜೈಲಿನಲ್ಲಿಟ್ಟು ರಾಜ್ಯ ಸರಕಾರ ದಸರಾ ಆಚರಣೆ ಮಾಡುತ್ತಿದೆ.‌ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ.‌ ಸೂತಕದ ನಡುವೆ ದಸರಾ ಆಚರಣೆ ಮಾಡುತ್ತಿದ್ದಾರೆʼ ಎಂದು ಕಿಡಿಕಾರಿದರು.

ರಾಜ್ಯದಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳು ಬತಪೀಡಿತದಿಂದ ಕೂಡಿವೆ. ಅವರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಗಮನ ಹರಿಸುತ್ತಿಲ್ಲ. ಈಗಾಗಲೇ 300 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ದಸರಾ ಆಚರಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ಬಂದ್ ಮಾಡುವುದಾಗಿ ನಾಲ್ಕು ದಿನಗಳ ಹಿಂದೆಯೇ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.‌ಮೈಸೂರಿನಲ್ಲಿ ರಾಜ್ಯದ ಸರ್ಕಾರದ ಅರ್ಧ ಸಚಿವರು ಮೈಸೂರಿನಲ್ಲಿಯೇ ಇದ್ದಾರೆ.‌ಸೌಜನ್ಯಕ್ಕಾದರೂ ರೈತರ ಬಳಿ ಬಂದು ಮಾತನಾಡದೆ ನಿರ್ಲಕ್ಷ್ಯ ವಹಿಸಿರುವುದು ರೈತರ ಮೇಲೆ ಈ ಸರ್ಕಾರಕ್ಕೆ ಇರುವ ಕಾಳಜಿ ಗೊತ್ತಾಗುತ್ತದೆ ಎಂದು ನುಡಿದರು.

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News