ಮೈಸೂರು ದಸರಾ: ಅರಮನೆ ಆವರಣದಲ್ಲಿ ಮಾವುತ, ಕಾವಾಡಿಗಳಿಗೆ ಉಪಹಾರ ಕೂಟ

Update: 2023-09-29 06:56 GMT

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರ ಅಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ಜಂಬೂಸವಾರಿ ಗಜಪಡೆಗಳ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಳಗಿನ ಉಹಾರ ಬಡಿಸುವ ಮೂಲಕ ಶುಭಹಾರೈಸಿದರು.

ಅರಮನೆ ಆವರಣದ ಜಯಮಾರ್ತಾಂಡ ದ್ವಾರದ ಬಳಿ ಶುಕ್ರವಾರ ಹಾಕಲಾಗಿದ್ದ ಪೆಂಡಾಲ್ ನಲ್ಲಿ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಇಡ್ಲಿ, ವಡೆ,ಚಟ್ನಿ, ಮಸಾಲೆ ದೋಸೆ, ಪೊಂಗಲಯ, ಕೇಸರಿ ಬಾತ್, ಹೋಳಿಗೆ ಉಪ್ಪಿಟ್ಟನ್ನು ಬಡಿಸಲಾಯಿತು.

ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಿಂದ ಕುಟುಂಬದ ಹೆಂಗಸರು ಮಕ್ಕಳು, ಸಂತಸ ಪಟ್ಟರು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ಸೆ.1 ರಂದು ಅರಮನೆಗೆ ದಸರಾ ಗಜಪಡೆಗಳ ಮೊದಲ ತಂಡ ಆಗಮಿಸಿತ್ತು. ಎರಡನೇ ತಂಡ ಸೆ.25 ರಂದು ಆಗಮಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಅತಮನೆ ಮಂಡಳಿ ವತಿಯಿಂದ ಉಪಹಾರ ವ್ಯವಸ್ಥೆ ಮಾಡಿಕೊಂಡು ಬಂದಿರುವ ಮಾದರಿಯಲ್ಲಿ ಈ ವರ್ಷವೂ ಸಹ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ವತಃ ತಾವೇ ಉಪಹಾರವನ್ನು ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರುಗಳಿಗೆ ಬಡಿಸಿದರು.ಇದೇ ವೇಳೆ ಶಾಸಕ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರುಗಳಾದ ಸಿ.ಎನ್, ಮಂಜೇಗೌಡ, ಡಾ.ಡಿ.ತಿಮ್ಮಯ್ಯ,ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯ,ಜಿ.ಪಂ. ಸಿಇಓ ಗಾಯತ್ರಿ, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ, ಡಿಡಿಪಿಐ ಪಾಂಡುರಂಗ, ಉಪಸ್ಥಿತರಿದ್ದರು.

ಬಳಿಕ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ತಾತ್ಕಾಲಿಕ ಶಾಲೆಯನ್ನು ಉದ್ಘಾಟನೆ ಮಾಡಿದರು. ಆಯುಷ್ ಇಲಾಖೆ ವತಿಯಿಂದ ಆಯುರ್ವೇಧ ಚಿಕಿತ್ಸಾ ಕೇಂದ್ರಕ್ಕೂ ಚಾಲನೆ ನೀಡಿದರು. ಅಶೋಲೊ ಆಸ್ಪತ್ರೆ ವತಿಯಿಂದ ಮಾವುತರು ಮತ್ತು ಕಾವಾಡಿಗಳು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News