ವಿಪಕ್ಷ ನಾಯಕನನ್ನು ನೇಮಕ ಮಾಡಿಕೊಳ್ಳದಂತಹ ಕೆಟ್ಟ ಪರಿಸ್ಥಿತಿ ರಾಜ್ಯದ ಇತಿಹಾಸದಲ್ಲಿ ಎಂದೂ ಇರಲಿಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು: ʼಕರ್ನಾಟಕದಲ್ಲಿ ಬಿಜೆಪಿ ದಿವಾಳಿಯಾಗಿದೆ. ನೂರು ದಿನ ಕಳೆದರೂ ಒಬ್ಬ ವಿಪಕ್ಷ ನಾಯಕನನ್ನು ನೇಮಕ ಮಾಡಿಕೊಳ್ಳಲಾಗದಂತಹ ಕೆಟ್ಟ ಪರಿಸ್ಥಿತಿ ರಾಜ್ಯದ ಇತಿಹಾಸದಲ್ಲಿ ಎಂದೂ ಇರಲಿಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.
ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷಗಳು ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳದಂತಹ ಕೆಟ್ಟ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಈಗಿನ ವಿರೋಧ ಪಕ್ಷವಾದ ಬಿಜೆಪಿಯವರು ಸರ್ಕಾರ ಬಂದು ನೂರು ದಿನ ಕಳೆದರು ವಿರೋಧ ಪಕ್ಷದ ನಾಯಕನನ್ನು ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ. ಬಿಜೆಪಿ ಎಲ್ಲಿದೆ ಎಂಬುದನ್ನು ಹುಡಕಬೇಕಿದೆ ಎಂದು ಮೂದಲಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದ ವೇಳೆ ನಮ್ಮನ್ನು ಬರದಂತೆ ದೂಚಿಸಿದ್ದರು. ಹಾಗಾಗಿ ನಾವು ಅವರನ್ನು ಭೇಟಿ ಮಾಡಲು ಹೋಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರು ವಾಪಸ್ ಕಾಂಗ್ರೆಸ್ ಗೆ ಬರುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ ನಮ್ಮ ಪಕ್ಷದ ಸಿದ್ಧಾಂತ ಕಾರ್ಯಕ್ತಮ ಒಪ್ಪಿ ಯಾರೇ ಬಂದರೂ ನಾವು ಸ್ವಾಗತಿಸಯತ್ತೇವೆ ಎಂದು ಹೇಳಿದರು.