ವಿಪಕ್ಷ ನಾಯಕನ ಆಯ್ಕೆಗೆ ಇನ್ನೂ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ: ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯ

Update: 2023-09-17 12:33 GMT

ಕೊಪ್ಪಳ, ಸೆ. 17: ‘ಬಿಜೆಪಿಯಲ್ಲಿ ಪ್ರತಿಯೊಂದು ಹುದ್ದೆಯೂ ಮಾರಾಟಕ್ಕಿದ್ದು, ವಿಪಕ್ಷ ನಾಯಕನ ಸ್ಥಾನಕ್ಕೆ ಟೆಂಡರ್ ಆಗದ ಕಾರಣ ಇನ್ನು ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿಲ್ಲ’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಹುದ್ದೆಗೆ 2.5 ಸಾವಿರ ಕೋಟಿ ರೂ. ಹಾಗೂ ಮಂತ್ರಿ ಹುದ್ದೆ ಪಡೆಯಲು 80 ಕೋಟಿ ರೂ.ನಿಗದಿಯಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದೀಗ ಚೈತ್ರಾ ಬಂಧನದ ಬಳಿಕ ಅದು ದೃಢಪಟ್ಟಿದೆ. ಶಾಸಕ ಸ್ಥಾನಕ್ಕೆ 7-8 ಕೋಟಿ ರೂ.ಹಣ ನಿಗದಿಯಾಗಿರುವುದು ಇದೀಗ ಹೊರ ಬಿದ್ದಿದೆ. ಆ ಪಕ್ಷದ ಲೋಕಸಭಾ ಸದಸ್ಯರ ಟಿಕೆಟ್ ಮಾರಾಟಕ್ಕಿದೆ’ ಎಂದು ಛೇಡಿಸಿದರು.

‘ಟೆಂಡರ್ ಕರೆಯದ ಕಾರಣ ಇನ್ನು ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಟೆಂಡರ್ ನಲ್ಲಿ ಹೆಚ್ಚು ಯಾರು ಬಿಡ್ ಮಾಡಲಿದ್ದಾರೆಯೋ ಅವರಿಗೆ ವಿಪಕ್ಷ ನಾಯಕನ ಹುದ್ದೆ ಲಭಿಸಬಹುದು ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‍ಗೆ ಯಾವುದೇ ನಷ್ಟ ಇಲ್ಲ. ಬದಲಿಗೆ ಆ ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ ಎಂದು ಹೇಳಿದರು.

‘ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ಕೋಮುವಾದಿ ಪಕ್ಷದ ಜತೆ ಕೈಜೋಡಿಸಲು ಮುಂದಾಗಿದ್ದಾರೆ. ಮುಂದೆ ಜನತೆ ಈ ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಕೇಂದ್ರದ ಬರ ನಿರ್ವಹಣೆ ಕೈಪಿಡಿ 2020ರ ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿ ವಿಳಂಬವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News