ಇವಿಎಂ ಬೇಡ, ಮತಪತ್ರ ಮಾತ್ರವೇ ಬೇಕು : ನಿವೃತ್ತ ಐಎಎಸ್ ಅಧಿಕಾರಿ ದೇವಸಹಾಯಂ ಒತ್ತಾಯ

Update: 2024-04-12 17:09 GMT

Photo : ಎಂಜಿ ದೇವಸಹಾಯಂ/ ಮುಹಮ್ಮದ್ ಪ್ರಾಚ( indianexpress.com )

ಬೆಂಗಳೂರು : ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಕೈಬಿಟ್ಟು, ಮತಪತ್ರ (ಬ್ಯಾಲೆಟ್ ಪೇಪರ್) ಬಳಸಿಯೇ ಚುನಾವಣೆ ನಡೆಸಬೇಕೆಂದು ಫೋರಂ ಫಾರ್ ಎಲೆಕ್ಟೋರಲ್ ಇಂಟಿಗ್ರಿಟಿ ಸಂಚಾಲಕ, ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಒತ್ತಾಯಿಸಿದ್ದಾರೆ.

ಶುಕ್ರವಾರ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತಪತ್ರಗಳಿಂದ ಮಾತ್ರ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯ. ಆದರೆ, ಇವಿಎಂ, ವಿವಿಪ್ಯಾಟ್ ವ್ಯವಸ್ಥೆಯು ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿಲ್ಲ. ಈ ಪದ್ಧತಿಯಲ್ಲಿ ಮತದಾರನಿಗೆ ತನ್ನ ಮತ ಚಲಾವಣೆಗೆ ಮುಂಚೆ ಚೀಟಿಯನ್ನು ಪರಿಶೀಲಿಸಲು ಅವಕಾಶ ನೀಡುವುದಿಲ್ಲ. ಕದಿಯುವುದು, ತಿರುಚುವುದು ಮತ್ತು ನಕಲಿ ಮತದಾನ ಸಾಧ್ಯತೆಗಳ ವಿರುದ್ಧ ಇದು ಯಾವುದೇ ಖಾತರಿ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು.

ಅದು ಅಲ್ಲದೆ, ಮತಪತ್ರದಲ್ಲಿ ಮತ ಚಲಾಯಿಸಿದ ಬಳಿಕ ತನ್ನ ಮತ ಸರಿ ಇದೆಯೇ ಎಂದು ಮತದಾರ ನೋಡಬಹುದು. ಬಳಿಕ ಮತಪೆಟ್ಟಿಗೆಗೆ ಹಾಕಬಹುದು. ಇವಿಎಂನಲ್ಲಿ ನೀವು ಮತ ಹಾಕಿದವರಿಗೇ ಮತ ಬಿದ್ದಿದೆಯೇ ಎಂಬುದು ಖಚಿತವಾಗುವುದಿಲ್ಲ ಎಂದ ಅವರು, ಭಾರತದಲ್ಲಿ ಚುನಾವಣೆಗೆ ಬಳಸುವ ಇವಿಎಂ ಬಗ್ಗೆ ನಿವೃತ್ತ ನ್ಯಾಯಮೂರ್ತಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪರಿಣತರನ್ನು ಒಳಗೊಂಡ ಚುನಾವಣೆಗಳ ನಾಗರಿಕ ಆಯೋಗ ಕೂಲಂಕಶವಾಗಿ ಅಧ್ಯಯನ ನಡೆಸಿ 2021ರ ಜನವರಿಯಲ್ಲಿ ವರದಿ ಪ್ರಕಟಿಸಿತ್ತು. ಅದರ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಿತ್ತು. ಇವಿಎಂ ಹೇಗೆ ನ್ಯಾಯಸಮ್ಮತವಲ್ಲ ಎಂಬುದು ಆ ಅಧ್ಯಯನ ವರದಿಯಲ್ಲಿದೆ ಎಂದು ಅವರು ತಿಳಿಸಿದರು.

ನಮ್ಮನ್ನು ನಾವು ಆಳಿಕೊಳ್ಳಲು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಏಕೈಕ ಮಾರ್ಗ ಚುನಾವಣೆ. ಆದರೆ, ಚುನಾವಣೆಗೆ ಬಳಸುವ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಅದರಲ್ಲಿರುವ ಮೈಕ್ರೋ ಕಂಟ್ರೋಲರ್ ಯಾರು ಪೂರೈಸುತ್ತಿದ್ದಾರೆ?. ಅವುಗಳ ಮಾಡೆಲ್ ಮತ್ತು ಹೆಸರು ಏನು?. ಚಿಹ್ನೆಗಳನ್ನು ಯಂತ್ರಗಳಿಗೆ ಲೋಡ್ ಮಾಡುವ ಕಾರ್ಯಾಚರಣೆ ಕೈಪಿಡಿ ಮುಂತಾದವುಗಳ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡುತ್ತಿಲ್ಲ. ಚುನಾವಣೆಗೆ ಬಳಸುತ್ತಿರುವ ಇವಿಎಂ ಮತ್ತು ವಿವಿಪ್ಯಾಟ್‍ಗಳನ್ನು ಎಲ್ಲಿಂದ ಬರುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣ ಗೌಪ್ಯತೆಯನ್ನು ಕಾಪಾಡುತ್ತಿರುವುದರಿಂದ ಚುನಾವಣೆಯ ಪಾರದರ್ಶಕತೆ ಮತ್ತು ಸಮಗ್ರತೆಯ ಬಗ್ಗೆ ಅನುಮಾನಗಳ ಎದ್ದಿವೆ ಎಂದು ಅವರು ಟೀಕಿಸಿದರು.

ಇನ್ನೂ, ಇವಿಎಂ ಯಂತ್ರಗಳು ಸರಕಾರಿ ಸ್ವಾಮ್ಯದ ಕಂಪೆನಿಗಳ ನಿಯಂತ್ರಣದಲ್ಲಿವೆ. ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಈ ಮೂಲಕ ಮತದಾರರ ಪಟ್ಟಿಯು ಯುಐಡಿಎಐ ಅಧೀನಕ್ಕೆ ಬಂದಿದೆ. ಹೀಗಾಗಿ, ಚುನಾವಣಾ ಆಯೋಗದ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಸ್ವತಂತ್ರವಾಗಿ ಚುನಾವಣೆ ನಡೆಯುತ್ತದೆ ಎಂದು ಹೇಳಲು ಹೇಗೆ ಸಾಧ್ಯ?. ಈ ಚುನಾವಣೆ ಅಸಂವಿಧಾನಿಕ ಆಗುವುದಿಲ್ಲವೇ? ಎಂದು ದೇವಸಹಾಯಂ ಪ್ರಶ್ನಿಸಿದರು.

ಈ ಸಂಬಂಧ ಮಾಹಿತಿ ಕೋರಿ ಚುನಾವಣಾ ಆಯೋಗಕ್ಕೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಉತ್ತರ ಕೇಳಲಾಗಿದೆ. ಆದರೆ, ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮತ ಚಲಾವಣೆಗೆ ಮುಂಚೆ ಚೀಟಿ ಪರಿಶೀಲಿಸಲು ಅವಕಾಶವಿಲ್ಲ. ಕದಿಯುವ, ತಿರುಚುವ, ನಕಲಿ ಮತ ಚಲಾಯಿಸುವ ಸಾಧ್ಯತೆಗಳ ವಿರುದ್ಧ ಇವಿಎಂ ಯಾವುದೇ ಖಾತ್ರಿ ನೀಡುವುದಿಲ್ಲ ಎಂಬುದು ವರದಿಯಲ್ಲಿತ್ತು. ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸುವುದಿರಲಿ, ಅಧಿಕೃತ ಸ್ವೀಕೃತಿಯನ್ನೇ ನೀಡಲಿಲ್ಲ ಎಂದರು.

ಬಳಿಕ 112 ತಂತ್ರಜ್ಞರು, ಪರಿಣತರು, ಹಿರಿಯ ನಾಗರಿಕರು, ನಾಗರಿಕ ಸೇವಾ ಅಧಿಕಾರಿಗಳು ಸಹಿ ಮಾಡಿದ ಮನವಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಿದರು. ಇವಿಎಂ ಪದ್ಧತಿಯಡಿ ಮತದಾನದಲ್ಲಿ ಹಸ್ತಕ್ಷೇಪ ಮಾಡಬಹುದು, ಫಲಿತಾಂಶವನ್ನು ತಿರುಚಬಹುದು ಎಂದು ಅದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.

ವಿವಿಪ್ಯಾಟ್ ಚೀಟಿ ನಿಜವಾದ ಮತದಾಖಲೆಯಾಗಿದ್ದು, ಇವಿಎಂ ಮೆಮೊರಿ ಅಲ್ಲ ಎಂದು ಚುನಾವಣಾ ನಿರ್ವಹಣೆ (ತಿದ್ದುಪಡಿ) ನಿಯಮಾವಳಿ-2013 ನಿಯಮ 56 ಡಿ (4)(ಬಿ) ತಿಳಿಸಿದೆ. ಆದರೆ, ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಲು ನಿರಾಕರಿಸಿ ಇವಿಎಂ ಮೆಮೊರಿ ಮೂಲಕವೇ ಮತ ಎಣಿಕೆಯನ್ನು ಚುನಾವಣಾ ಆಯೋಗ ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಮುಹಮ್ಮದ್ ಪ್ರಾಚ, ಬರಹಗಾರ ಅಗ್ರಹಾರ ಕೃಷ್ಣಮೂರ್ತಿ, ಪತ್ರಕರ್ತ ಎಸ್.ಆರ್.ಆರಾಧ್ಯ ಸೇರಿದಂತೆ ಪ್ರಮುಖರಿದ್ದರು.

ಇವಿಎಂಗೆ ವೈರಸ್ ಅಟ್ಯಾಕ್: ಇವಿಎಂ ಅನ್ನು ಹ್ಯಾಕ್ ಮಾಡಲು ಸಾಧ್ಯ ಮಾತ್ರವಲ್ಲದೆ, ವೈರಸ್ ಅಟ್ಯಾಕ್ ಮಾಡಲು ಕೂಡ ಸಾಧ್ಯ ಎನ್ನುವ ಆತಂಕಕಾರಿ ಮಾಹಿತಿಯನ್ನು ತಂತ್ರಜ್ಞರು ಕಂಡುಕೊಂಡಿದ್ದಾರೆ. ಹಾಗಾಗಿ ಮತಪತ್ರಗಳ ಮೂಲಕವೇ ಮತದಾನ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಮುಹಮ್ಮದ್ ಪ್ರಾಚ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News