ಯಾರೇ ಆಗಿರಲಿ ಸಾಲಗಾರ ಸಾಲಗಾರನೇ: ಬ್ಯಾಂಕ್ ವಸೂಲಿಯಿಂದ ರಕ್ಷಣೆ ನೀಡಲಾಗದು ಎಂದ ಹೈಕೋರ್ಟ್

Update: 2023-08-21 18:11 GMT

ಬೆಂಗಳೂರು, ಆ.21: ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ ಅಥವಾ ಹಾಲಿ ನ್ಯಾಯಮೂರ್ತಿಯೇ ಆಗಿರಲಿ, ಸಾಲಗಾರ ಸಾಲಗಾರನೇ. ಹೀಗಾಗಿ, ಸಾಲ ವಸೂಲಿಗೆ ಬ್ಯಾಂಕ್ ಮುಂದಾದಾಗ ರಕ್ಷಣೆ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.

ಸಾಲ ವಸೂಲಿಗೆ ಮುಂದಾಗಿರುವ ಬ್ಯಾಂಕ್‍ನ ಬಲವಂತದ ಕ್ರಮಗಳಿಂದ ರಕ್ಷಣೆ ಕೋರಿ ಹಿರಿಯ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಸುಬ್ರಹ್ಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಸಾಲ ಪಡೆದಿದ್ದು, ಸಾಲ ಮರುಪಾವತಿಸುವಲ್ಲಿ ಸಾಕಷ್ಟು ವಿಳಂಬ ಮಾಡಿದ್ದಾರೆ. ಬ್ಯಾಂಕ್ ಸಾಲ ವಸೂಲಿಗೆ ಮುಂದಾದ ನಂತರ ಅರ್ಜಿದಾರರು ಹೈಕೋರ್ಟ್ ರಕ್ಷಣೆ ಕೋರಿದ್ದು, ನ್ಯಾಯಾಲಯ ಸಾಲ ಹಿಂದಿರುಗಿಸಲು ಹಲವು ಅವಕಾಶಗಳನ್ನು ನೀಡಿದೆ. ಸ್ವತಃ ಅರ್ಜಿದಾರರು ನಿಗದಿತ ಸಮಯದಲ್ಲಿ ಸಾಲ ವಾಪಸ್ ನೀಡುವ ಕುರಿತು ಭರವಸೆ ನೀಡಿದ್ದಾರೆ. ಹೀಗೆ ಕಲ್ಪಿಸಿದ ಹಲವಾರು ಅವಕಾಶಗಳ ಹೊರತಾಗಿಯೂ ಸಾಲ ಹಿಂದಿರುಗಿಸದೆ ಮಾತು ತಪ್ಪಿದ್ದಾರೆ.

ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯ ರಕ್ಷಣೆ ನೀಡಲಾಗದು. ಇನ್ನು ಅರ್ಜಿದಾರರು ವಕೀಲರಾಗಿದ್ದು, ನ್ಯಾಯಾಲಯ ಮುಲಾಜು ತೋರಿಸಿದರೆ ಸಮಾಜದ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ. ಇದೇ ವೇಳೆ ಬ್ಯಾಂಕ್ ತನ್ನ ಬಾಕಿ ವಸೂಲಿಗೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.

ಹೈಕೋರ್ಟ್‍ನ ಹಿರಿಯ ವಕೀಲರಾಗಿರುವ ಅರ್ಜಿದಾರರು ಸುಬ್ರಹ್ಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 1.50 ಕೋಟಿ ರೂ.ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕ್ ಬೇರೆ ದಾರಿ ಕಾಣದೆ ಅರ್ಜಿದಾರರಿಂದ ಬಲವಂತವಾಗಿ ಸಾಲ ವಸೂಲಾತಿ ಪ್ರಕ್ರಿಯೆ ಪ್ರಾರಂಭಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News