ಬಿಜೆಪಿ ಸೇರಿದ್ದ 17 ಜನರಲ್ಲಿ 16 ಜನ ಕಾಂಗ್ರೆಸ್ ಗೆ ಹೋಗಬಹುದು; ನಾನಂತೂ ಹೋಗಲ್ಲ ಎಂದ ಶಾಸಕ ಮುನಿರತ್ನ
ಬೆಂಗಳೂರು,ಆ.16: ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಾಸಕರು ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಆರ್. ಆರ್. ನಗರ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ನಗರದ ವೈಯಾಲಿಕಾವಲ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ʼʼನನಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಬಿಜೆಪಿಯಲ್ಲೇ ಇರುತ್ತೇನೆ ರಾಜಕೀಯ ಬೇಡ ಎನಿಸಿದರೇ ನಿವೃತ್ತಿಯಾಗುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಲ್ಲʼʼ ಎಂದು ಸ್ಪಷ್ಟನೆ ನೀಡಿದರು.
ʼʼನಾನು ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ. 17 ಜನರಲ್ಲಿ 16 ಜನ ಹೋಗ್ತಾರೋ ಬಿಡ್ತಾರೋ, ಆದ್ರೆ ನಾನಂತೂ ಕಾಂಗ್ರೆಸ್ ಗೆ ಹೋಗಲ್ಲ. ನಮಗೆ ಬಿಜೆಪಿಯೇ ಭವಿಷ್ಯ, ಬಿಜೆಪಿಯ ಚಿನ್ಹೆಯೇ ಆಧಾರ ನಾನು ಬಿಜೆಪಿ ತೊರೆಯಲ್ಲ. ಇದು ನನ್ನ ಗಟ್ಟಿ ನಿರ್ಧಾರʼʼ ಎಂದು ಹೇಳಿದರು.
ನನ್ನನ್ನ ಮುನಿರತ್ನ ಭೇಟಿಯಾಗಿದ್ದರು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುನಿರತ್ನ, ʼʼಡಿಕೆ ಶಿವಕುಮಾರ್ ಬೆಂಗಳೂರಿನ ಉಸ್ತುವಾರಿ ಸಚಿವರು. ಡಿಕೆ ಶಿವಕುಮಾರ್ ಗೆ ಎಲ್ಲಾ ಕ್ಷೇತ್ರಗಳಿಗೆ ಹೋಗುವ ಹಕ್ಕಿದೆ. ಭೇಟಿಯಾಗಿದ್ದನ್ನು ರಾಜಕೀಯವಾಗಿ ಬಳಸಿದ್ದು ತಪ್ಪು. ಡಿಕೆ ಶಿವಕುಮಾರ್, ಅಭಿವೃದ್ಧಿ ಬಗ್ಗೆ ಮಾತನಾಡಲಿ ರಾಜಕೀಯವಾಗಿ ನೋಡೋದನ್ನ ಬಿಡಲಿʼʼ ಎಂದು ತಿಳಿಸಿದರು.