ಸಂಸತ್ ಭದ್ರತಾ ವೈಫಲ್ಯ| ತನಿಖೆ ನಡೆಸಲು ಪ್ರತಾಪ್ ಸಿಂಹರನ್ನು ವಶಕ್ಕೆ ಪಡೆದಿಲ್ಲವೇಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್
ಬೆಂಗಳೂರು: ಸಂಸತ್ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರಸ್, ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ. ಆದ್ದರಿಂದ ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಅವರು ಕೂಡಲೇ ಪ್ರತಾಪ್ ಸಿಂಹರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಿ ತನಿಖೆ ಒಪಡಿಸಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ʼಎಕ್ಸ್ʼ ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, " ಹಿಂದೆ 2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ" ಎಂದು ಟೀಕಿಸಿದೆ.
"ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ. ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ. ಸ್ಫೀಕರ್ ಓಂ ಬಿರ್ಲಾ ಅವರು ಅವರು ಕೂಡಲೇ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ತನಿಖೆ ನಡೆಸಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ತನ್ನ ಇನ್ನೊಂದು ಪೋಸ್ಟ್ ನಲ್ಲಿ “300 ಕೆಜಿ RDX ಯಾವುದೇ ಅಡೆತಡೆ ಇಲ್ಲದೆ ಕಾಶ್ಮೀರದೊಳಗೆ ಬರುತ್ತದೆ. ಸ್ಪೋಟಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಂಸತ್ತಿನೊಳಗೆ ಬರುತ್ತದೆ. ಸಂಸತ್ತನ್ನೇ ಕಾಯಲಾಗದ ಚೌಕಿದಾರನಿಗೆ ದೇಶ ಕಾಯಲು ಸಾಧ್ಯವೇ" ಎಂದು ಪ್ರಶ್ನಿಸಿದೆ.
ʼಈ ಮಟ್ಟಿಗೆ ಭದ್ರತಾ ಲೋಪವಾಗಿದ್ದು ಹೇಗೆ? ಯಾಕೆ? ಈ ಸಂಸತ್ ದಾಳಿಯ ಹಿಂದೆ ಪ್ರತಾಪ್ ಸಿಂಹರದ್ದು ಪ್ರಮುಖ ಪಾತ್ರವಿದೆʼ ಎಂದು ಹೇಳಿದೆ.
" ಸಂಸತ್ತಿಗೆ ನುಗ್ಗಿದ ಘಾತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹರಿಂದ. ಈ ದಾಳಿಕೊರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ. ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ʼಈ ಎಲ್ಲಾ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹರನ್ನು ವಶಕ್ಕೆ ಪಡೆದಿಲ್ಲವೇಕೆ.ದೇಶದಲ್ಲಿ ಭದ್ರತಾ ಲೋಪವಷ್ಟೇ ಅಲ್ಲ, ತನಿಖೆಯಲ್ಲಿ ಲೋಪವೂ ನಡೆಯುತ್ತಿರುವುದೇಕೆ ಎಂದು ತನಿಖೆಗೆ ಆಗ್ರಹಿಸಿದೆ.