ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಸುವರ್ಣ ವಿಧಾನಸೌಧಲ್ಲಿ ಬಿಗಿ ಪೊಲೀಸ್ ಭದ್ರತೆ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 14: ಲೋಕಸಭೆಯ ಸಂಸತ್ ನ ನಿನ್ನೆ ನಡೆದ ಭಾರೀ ಭದ್ರತಾ ವೈಫಲ್ಯ ಹಿನ್ನೆಲೆಯಲ್ಲಿ ಇಲ್ಲಿನ ಸುವರ್ಣಸೌಧದಲ್ಲಿನ ಉಭಯ ಸದನಗಳಲ್ಲಿ ಗುರುವಾರ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸುವರ್ಣ ವಿಧಾನಸೌಧ ಪ್ರವೇಶಿಸುವ ನಾಲ್ಕು ದ್ವಾರಗಳ ಬಳಿಯು ಬಿಗಿ ಪೊಲೀಸ್ ಭದ್ರತೆ ಮಾಡಿದ್ದು, ಪ್ರವೇಶಕ್ಕೆ ಅಗತ್ಯ ಪಾಸ್‍ಗಳಿದ್ದರೆ ಮಾತ್ರವೇ ಒಳಗೆ ಹೋಗಲು ಅನುವು ಮಾಡಿಕೊಡಲಾಗುತ್ತಿತ್ತು. ಪಾಸ್ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸುವರ್ಣಸೌಧದ ಎಲ್ಲ ದ್ವಾರಗಳಲ್ಲಿ ಪಾಸ್‍ಗಳನ್ನು ತಪಾಸಣೆ ಮಾಡಿ ಪೊಲೀಸರು ಒಳಗೆ ಬಿಡುತ್ತಿದ್ದು, ಪಾಸ್ ಇಲ್ಲದವರನ್ನು ಒಳ ಹೋಗಲು ತಡೆಯಲಾಗುತ್ತಿತ್ತು. ಹೀಗಾಗಿ ಸಚಿವರು, ಶಾಸಕರೊಂದಿಗೆ ಬರುತ್ತಿದ್ದ ಅವರ ಬೆಂಬಲಿಗರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ವಿಧಾನಸಭೆ ಮತ್ತು ಪರಿಷತ್ ಗ್ಯಾಲರಿಗಳ ಪ್ರವೇಶಕ್ಕೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸಾರ್ವಜನಿಕರು ಪಾಸ್ ವಿತರಣೆ ಮಾಡಿರಲಿಲ್ಲ. ಹೀಗಾಗಿ ಸದಾ ತುಂಬಿತುಳುಕುತ್ತಿದ್ದ ಗ್ಯಾಲರಿಗಳಲ್ಲಿ ಖಾಲಿ ಖಾಲಿಯಾಗಿದ್ದವು. ಅಲ್ಲದೆ, ವಿಧಾನಸಭೆ ಗ್ಯಾಲರಿಯಲ್ಲಿ ಮಾರ್ಷಲ್‍ಗಳ ಭಾರೀ ಭದ್ರತೆಯನ್ನು ಕಲ್ಪಿಸಲಾಗಿತ್ತು.