ಮೇಲ್ಮನವಿ ಬಾಕಿಯಿದೆ ಎಂಬ ಕಾರಣಕ್ಕೆ ‘ಪೆರೋಲ್ ನಿರಾಕರಿಸುವಂತಿಲ್ಲ’: ಹೈಕೋರ್ಟ್
ಬೆಂಗಳೂರು: ಕ್ರಿಮಿನಲ್ ಕೇಸ್‍ಗಳಲ್ಲಿ ವ್ಯಕ್ತಿಯೊಬ್ಬ ಶಿಕ್ಷೆಗೆ ಗುರಿಯಾದ ಬಳಿಕ ಸಲ್ಲಿಕೆಯಾಗಿರುವ ಮೇಲ್ಮನವಿ ವಿಚಾರಣಾ ಹಂತದಲ್ಲಿದೆ ಎಂಬ ಕಾರಣಕ್ಕೆ ಪೆರೋಲ್ ಮನವಿ ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಳಗಾವಿಯ ಅರ್ಜುನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ 15 ದಿನಗಳಲ್ಲಿ ಕಾರಾಗೃಹದ ಅಧಿಕಾರಿಗಳು ಪೆರೋಲ್ ಅರ್ಜಿಯನ್ನು ಪರಿಗಣಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಜೊತೆಗೆ, ಈ ಆದೇಶವನ್ನು ಎಡಿಜಿಪಿ(ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ)ಗೆ ತಲುಪಿಸಬೇಕು, ಅವರು ಎಲ್ಲ ಕಾರಾಗೃಹಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದರೆ, ಆಗ ಪೆರೋಲ್ ಅರ್ಜಿಯನ್ನು ಪರಿಗಣಿಸಬೇಕಾಗುತ್ತದೆ.
ಆಗಲೂ ಸಹ ಒಂದು ವೇಳೆ ಪೆರೋಲ್ ಅರ್ಜಿ ತಿರಸ್ಕಾರವಾಗಿದ್ದರೂ ಸಹ ಪೆರೋಲ್ ಅರ್ಜಿಯನ್ನು ಪರಿಶೀಲಿಸಿ ಯಾವ ಆಧಾರದಲ್ಲಿ ಮನವಿ ಸಲ್ಲಿಸಲಾಗಿದೆ ಎಂಬುದನ್ನು ಆಧರಿಸಿ ನೈಜ ಕಾರಣವಿದ್ದರೆ ಮಾತ್ರ ತಿರಸ್ಕರಿಸಬೇಕೇ ಹೊರತು ಇಲ್ಲವಾದರೆ ಅರ್ಜಿ ಪುರಸ್ಕರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾನೂನು ರೀತಿಯಲ್ಲಿ ಅರ್ಜಿದಾರರು ತಮಗೆ ಅಧೀನ ನ್ಯಾಯಾಲಯ ಶಿಕ್ಷೆಗೆ ಒಳಪಡಿಸಿರುವುದನ್ನು ಪ್ರಶ್ನಿಸಿದ್ದಾರೆ. ಆದರೆ ಮೇಲ್ಮನವಿ ಬಾಕಿ ಇದೆ ಎಂಬ ಕಾರಣ ನೀಡಿ ಪೆರೋಲ್ ನಿರಾಕರಿಸಲಾಗಿದೆ. ಹೀಗಾಗಿ, ನ್ಯಾಯಾಲಯ ಪೆರೋಲ್ ತಿರಸ್ಕರಿಸಿರುವ ಹಿಂಬರಹ ರದ್ದುಗೊಳಿಸಿ, ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಾನೂನು ಪ್ರಕಾರ ಪೆರೋಲ್ ಅರ್ಜಿ ಪರಿಗಣಿಸುವಂತೆ ನಿರ್ದೇಶನ ನೀಡಿದೆ.
ಪ್ರಕರಣವೇನು?: ಅರ್ಜಿದಾರರು 2018ರ ಎಪ್ರಿಲ್ 6ರಿಂದ ಜೈಲಿನಲ್ಲಿದ್ದಾರೆ ಮತ್ತು ಅವರು ಹಲವು ಕಾರಣಗಳನ್ನು ನೀಡಿ 2022ರ ಡಿಸೆಂಬರ್ 7ರಂದು ಪೆರೋಲ್ ಅರ್ಜಿ ಸಲ್ಲಿಸಿದ್ದರು. ಆದರೆ, ಕ್ರಿಮಿನಲ್ ಮೇಲ್ಮನವಿ ಹಾಗೂ ಜಾಮೀನು ಅರ್ಜಿ ಬಾಕಿ ಇದೆ ಎಂಬ ಕಾರಣ ನೀಡಿದ ಜೈಲಿನ ಅಧೀಕ್ಷಕರು ಪೆರೋಲ್ ಅರ್ಜಿಯನ್ನು ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.