ಜನರೇ ನಮ್ಮ ಪಾಲಿನ ದೇವರು, ಜನರ ಸೇವೆಗೆ ಸದಾ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-01-05 10:57 GMT

ಬೆಂಗಳೂರು: "ಜನರೇ ನಮ್ಮ ಪಾಲಿನ ದೇವರು. ಜನರ ಸಮಸ್ಯೆ ಸರ್ಕಾರದ ಸಮಸ್ಯೆ, ಜನರ ಪರಿಹಾರವೇ ರಾಜ್ಯದ ಪರಿಹಾರ. ಜನರ ಸೇವೆಗೆ ನಾವು ಸದಾ ಬದ್ಧ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಯಲಹಂಕದಲ್ಲಿ ಶುಕ್ರವಾರ ನಡೆದ "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಲ್ಲಿಗೆ ನಾನೊಬ್ಬನೇ ಬಂದಿಲ್ಲ. ಪೊಲೀಸ್ ಸೇರಿದಂತೆ ಸುಮಾರು 300 ಅಧಿಕಾರಿಗಳು ನಿಮ್ಮ ಸೇವೆಗೆ ಬಂದಿದ್ದೇವೆ. ನೀವು ನಮಗೆ ಅಧಿಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದರು.

ಈ ಹಿಂದೆ ಅನೇಕರು ಬೆಂಗಳೂರಿನ ಮಂತ್ರಿಯಾಗಿ ಅವರ ಶೈಲಿಯಲ್ಲಿ ಕೆಲಸ ಮಾಡಿದ್ದಾರೆ. ನಾನು 35 ವರ್ಷಗಳ ಹಿಂದೆ ಶಾಸಕನಾದಾಗ ಪ್ರತಿ ವರ್ಷ ಪ್ರತಿ ಹಳ್ಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಕಷ್ಟ ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಅದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂದರು.

ಪ್ರತಿನಿತ್ಯ ಜನ ನಮ್ಮ ಮನೆ ಬಾಗಿಲಿಗೆ ತಮ್ಮ ಸಮಸ್ಯೆ ಹೊತ್ತುಕೊಂಡು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿಗಳು ಜನಸ್ಪಂದನ ಕಾರ್ಯಕ್ರಮ ಮಾಡಿ, ಎಲ್ಲಾ ಸಚಿವರಿಗೂ ಸೂಚನೆ ನೀಡಿದ್ದಾರೆ. ನಾನೂ ನನ್ನ ಕ್ಷೇತ್ರ ಹಾಗೂ ಆನೇಕಲ್ ನಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದೇನೆ ಎಂದು ತಿಳಿಸಿದರು.

ಜನ ತಮ್ಮ ಆಸ್ತಿಗಳ ಖಾತೆ ವಿಚಾರ, ಪಿಂಚಣಿ ಸೇರಿದಂತೆ ಸರ್ಕಾರದ ಸವಲತ್ತುಗಳ ಸಮಸ್ಯೆ ಹೊತ್ತು ತರುತ್ತಾರೆ. ಅಧಿಕಾರಿಗಳು ಗೌರವ ನೀಡದಿದ್ದಾಗ ಜನ ರಾಜಕಾರಣಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಲಂಚ ಕೇಳಿ ಹಿಂಸೆ ಕೊಟ್ಟಾಗ ಜನ ನಮ್ಮತ್ತ ಬರುತ್ತಾರೆ. ಇಂತಹ ದೂರುಗಳು ಹೆಚ್ಚುತ್ತಿವೆ. ಇವುಗಳನ್ನು ತಪ್ಪಿಸಬೇಕು ಎಂದು ಹೇಳಿದರು.

ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ನೀಡಿ. ಯಾರೇ ಆಗಲಿ ನನ್ನ ಹೆಸರು, ಕೃಷ್ಣ ಭೈರೇಗೌಡ, ವಿಶ್ವನಾಥ್, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಯಾರ ಹೆಸರಲ್ಲಿ ಹಣ ಕೇಳಿದರೂ ನಮ್ಮ ಗಮನಕ್ಕೆ ತನ್ನಿ, ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ, 5 ಕೆ.ಜಿ ಅಕ್ಕಿಯ ಹಣ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸದಿದ್ದರೆ ನಾವೇ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡಿ ಅದನ್ನು ವಿತರಣೆ ಮಾಡುತ್ತೇವೆ. ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ವಿದ್ಯುತ್ ಉಚಿತ ಸಿಗುತ್ತಿದೆ. ಶೂನ್ಯ ಬಿಲ್ ಬರುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಯಿಂದ 5 ಲಕ್ಷ ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಕೆಲವರು ಪತ್ನಿ ಹೆಸರಲ್ಲಿ ಅರ್ಜಿ ಹಾಕಿ ಪತಿಯ ದೂರವಾಣಿ ಹಾಗೂ ಬ್ಯಾಂಕ್ ಖಾತೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವರ್ಷ ಗ್ಯಾರಂಟಿ ಯೋಜನೆಗೆ 36 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಮುಂದೆ ಇದು 59 ಸಾವಿರ ಕೋಟಿಗೆ ತಲುಪಲಿದೆ.

ಬೆಂಗಳೂರು ಯೋಜಿತ ನಗರವಲ್ಲ. ಹಿಂದೆ ಕೆಂಪೇಗೌಡರು ನಾಲ್ಕು ಸ್ತಂಭಗಳನ್ನು ಅಳವಡಿಸಿ ನಗರ ನಿರ್ಮಾಣ ಮಾಡಿದ್ದರು. ಆದರೆ ಈಗ ಅದು ಐದಾರು ಪಟ್ಟು ವಿಸ್ತೀರ್ಣವಾಗಿದೆ. ಇಲ್ಲಿರುವ ಹವಾಮಾನ, ಶಿಕ್ಷಣ, ಆರೋಗ್ಯ ಸೌಲಭ್ಯದಿಂದ ಬೆಂಗಳೂರಿಗೆ ಬಂದವರು ವಾಪಸ್ ಹೋಗುವುದಿಲ್ಲ. ಹೀಗಾಗಿ ಬೆಂಗಳೂರಿನ ನಿರ್ವಹಣೆ ಬಹಳ ಮುಖ್ಯ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News