ಅದಾನಿ-ಪ್ರಧಾನಿ ನಡುವಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿಯವರ ಪ್ರಶ್ನೆಗೆ ಮೋದಿ ಇದುವರೆಗೂ ಉತ್ತರಿಸಿಲ್ಲ: ಕಾಂಗ್ರೆಸ್
ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಅಕ್ರಮವಾಗಿ ಅನರ್ಹಗೊಳಿಸಿರುವ ಬಿಜೆಪಿಯ ದ್ವೇಷ ರಾಜಕಾರಣದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅದಾನಿ ಹಾಗೂ ಪ್ರಧಾನಿ ನಡುವಿನ ಸಂಬಂಧದ ಕುರಿತು ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗಳಿಗೆ ಇದುವರೆಗೂ ಮೋದಿ ಉತ್ತರಿಸಿಲ್ಲ. ಉತ್ತರಿಸುವ ಬದಲಾಗಿ ಅನರ್ಹತೆಯ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಟೀಕಿಸಿದೆ.
ಪ್ರಶ್ನೆಗಳನ್ನು ಹತ್ತಿಕ್ಕುವ ಆಡಳಿತವನ್ನು ಪ್ರಜಾಪ್ರಭುತ್ವ ಎನ್ನುವುದಿಲ್ಲ, ಸರ್ವಧಿಕಾರ ಎನ್ನುತ್ತಾರೆ. ಸರ್ವಧಿಕಾರಿಗಳೆಲ್ಲರೂ ದುರಂತ ಅಂತ್ಯ ಕಂಡಿರುವುದು ಇತಿಹಾಸದಲ್ಲಿದೆ ಎಂದು ಹೇಳಿದೆ.
ಅದಾನಿ ಹಗರಣವನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲು ಷಡ್ಯಂತ್ರ ರೂಪಿಸಿದ ಕೇಂದ್ರ ಸರ್ಕಾರ ಅಕ್ಷರಶಃ ದ್ವೇಷ ರಾಜಕಾರಣದ ಪರಮಾವಧಿಗೆ ತಲುಪಿದೆ. ಈ ದೇಶದಲ್ಲಿ ಭ್ರಷ್ಟಾಚಾರವನ್ನು ಯಾರೊಬ್ಬರೂ ಪ್ರಶ್ನಿಸಬಾರದು ಎನ್ನುವುದೇ ಸರ್ವಾಧಿಕಾರಿಯ ಉದ್ದೇಶವೇ? ಎಂದು ಪ್ರಶ್ನಿಸಿದೆ.
ಭಾರತವನ್ನು ವಿಭಜಿಸಿ ಆಳುವವರು ಭಾರತವನ್ನು ಜೋಡಿಸುವ ನಾಯಕನನ್ನು, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹಂಚಲು ಹೊರಟ ನಾಯಕನನ್ನು ಹೇಗೆ ಸಹಿಸಬಲ್ಲರು? ದ್ವೇಷದ ವ್ಯಾಪಾರಿಗಳಿಗೆ ರಾಹುಲ್ ಗಾಂಧಿ ನುಂಗಲಾರದ ತುತ್ತಾಗಿದ್ದಾರೆ, ಈ ಕಾರಣಕ್ಕಾಗಿಯೇ ಅನರ್ಹತೆ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಿದೆ.