ರಾಜ್ಯಕ್ಕೆ ಬರುವ ಹೂಡಿಕೆದಾರರ ಮೇಲೆ ಪ್ರಧಾನಿ ಮೋದಿ ಒತ್ತಡ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ನಾವು ವಿದೇಶ ಸುತ್ತಿ ಕರ್ನಾಟಕಕ್ಕೆ ಹೂಡಿಕೆದಾರರನ್ನು ಕರೆದುಕೊಂಡು ಬರುತ್ತೇವೆ. ಅಷ್ಟರೊಳಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವಾಲಯದ ಅಧಿಕಾರಿಗಳು ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್ ಅಥವಾ ಉತ್ತರ ಪ್ರದೇಶಕ್ಕೆ ಹೋಗುವಂತೆ ಒತ್ತಡ ಹೇರುತ್ತಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉನ್ನತ ಮಟ್ಟದ ನಿಯೋಗವು ಹೂಡಿಕೆ ಆಕರ್ಷಣೆಗಾಗಿ ಅಮೆರಿಕ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿದ್ದ ಕುರಿತು ಮಾಹಿತಿ ನೀಡಲು ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ವಿದೇಶಿ ಹೂಡಿಕೆ ಆಕರ್ಷಣೆಗೆ ಪ್ರಧಾನಿ ಮೋದಿ ಅಡ್ಡಗಾಲು ಹಾಕುತ್ತಿದ್ದಾರೆ.ಅಷ್ಟೇ ಮಾತ್ರವಲ್ಲದೆ, ನಾವು ಕರೆದುಕೊಂಡು ಬರುವ ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರಿ, ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.
ತೆಲಂಗಾಣಕ್ಕೆ ಬಂದ ಹೂಡಿಕೆದಾರರಿಗೂ ಒತ್ತಡ ಹೇರಿರುವ ಉದಾಹರಣೆಗಳಿವೆ. ಮುಂದೆ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದ ಅವರು, ಗುಜರಾತ್‍ನಲ್ಲಿ ಹೂಡಿಕೆ ಮಾಡುವವರಿಗೆ ನೀಡುವಂತಹ ಉತ್ತೇಜನಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವವರಿಗೂ ನೀಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅದು ಅಲ್ಲದೆ, ನಮ್ಮ ರಾಜ್ಯದ ಮಾನವ ಸಂಪನ್ಮೂಲಕ್ಕೆ ಬಹಳ ಬೇಡಿಕೆ ಇದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಬೇಡಿಕೆ ಹೆಚ್ಚಿದೆ. ಚೀನಾ, ಯುರೋಪಿಯನ್ ದೇಶಗಳು, ಅಮೆರಿಕಾ ಕಂಪೆನಿಗಳ ಜೊತೆಗೆ ನಮ್ಮ ಸ್ಪರ್ಧೆ ಇದೆ. ನವೋದ್ಯಮದಲ್ಲಿ, ನಾವು 9ನೇ ಸ್ಥಾನದಲ್ಲಿದ್ದು, ಮುಂದಿನ 4 ವರ್ಷಗಳ ಒಳಗೆ 4ನೇ ಸ್ಥಾನಕ್ಕೆ ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ವಿದೇಶಿ ಭೇಟಿ ಸಂದರ್ಭದಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆ ಬಗ್ಗೆ, ವಿವಿಧ ಕಂಪೆನಿಗಳ ಜೊತೆ ಚರ್ಚೆ ಮಾಡಲಾಗಿದೆ. ಲಂಡನ್ ಮತ್ತು ಅಮೆರಿಕಾ ದೇಶಗಳ ಪ್ರವಾಸ ಮಾಡಿ ವಾಪಸ್ ಬಂದಿದ್ದೇವೆ. ಉದ್ಯೋಗ ಸೃಷ್ಟಿ, ಬಂಡವಾಳ ಹರಿದುಬರುವ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಕೌಶಲ್ಯ ಅಭಿವೃದ್ಧಿ ಬಗ್ಗೆಯೂ ಮಾಡಲಾಗಿದೆ. ಮೈಕ್ರೋ ಸಾಫ್ಟ್ ಜೊತೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರೊಂದಿಗೆ ಮೆಡಿಕಲ್ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಕರ್ನಾಟಕಕ್ಕೆ ತರುವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕರ್ನಾಟಕ ಬಂಡವಾಳ ಹೂಡಿಕೆಗೆ ಪೂರಕವಾದ ರಾಜ್ಯ ಎಂದು ಉದ್ದಿಮೆದಾರರೂ ಒಪ್ಪಿದ್ದಾರೆ. ಹಲವಾರು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಅವರು ವಿವರಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ಈಗಾಗಲೇ ಬ್ರಿಟನ್ ಹಾಗೂ ಅಮೆರಿಕ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿರುವುದಲ್ಲದೆ ಹೂಡಿಕೆದಾರರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಈ ಭೇಟಿಯ ಪರಿಣಾಮವಾಗಿ ರಾಜ್ಯಕ್ಕೆ 51,000 ಕೋಟಿ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ನುಡಿದರು.
ಅಂತಾರಾಷ್ಟ್ರೀಯ ಮಟ್ಟದ ಹಲವು ಸಂಶೋಧನಾ ಕೇಂದ್ರಗಳು ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ. ಎಐ ನೆಟ್‍ವರ್ಕ್ ವಿಸ್ತರಣೆ ಕುರಿತು ಚರ್ಚೆ ನಡೆದಿದ್ದು, ವಿದೇಶಿ ಭೇಟಿಯಿಂದ ಲಾಭವೇ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಸೇರಿದಂತೆ ಪ್ರಮುಖರಿದ್ದರು.