ಗೋಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ರಾಜಕೀಯ; ರೈತರು ಸಂಕಷ್ಟದಲ್ಲಿ: ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ

Update: 2023-08-24 18:09 GMT

ಬೆಂಗಳೂರು, ಆ. 24: ‘ತಳಮಟ್ಟದಲ್ಲಿ ರೈತರ ಸಮಸ್ಯೆ, ಕೃಷಿ ಚಟುವಟಿಕೆಗಳ ಅರಿವೇ ಇಲ್ಲದ ‘ಈಡಿಯಟ್ಸ್’ಗಳು ಮಾತ್ರ ಗೋಹತ್ಯೆ ನಿಷೇಧಿಸಬೇಕು ಎನ್ನುತ್ತಾರೆ. ಜೊತೆಗೆ ಇಂತಹ ದಡ್ಡರೇ ಗೋರಕ್ಷಣೆ ಹೆಸರಿನಲ್ಲಿ ಕೆಲಸ ಮಾಡುತ್ತಾರೆ ಎಂದು ರೇಮನ್ ಮಾಗ್ಸಸೆ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಹೇಳಿದ್ದಾರೆ.

ಗುರುವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಪರ್ಯಾಯ ಕೃಷಿ ಧೋರಣೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಆದರೆ, ವಾಸ್ತವ ಸ್ಥಿತಿಯ ಬೇರೆಯೇ ಇದ್ದು, ರೈತಾಪಿ ವರ್ಗದ ಅಳಲು ಯಾರು ಕೇಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗೋರಕ್ಷಣೆ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವವರು, ಗೋಹತ್ಯೆ ನಿಷೇಧಿಸಬೇಕು ಎನ್ನುವವರು ಬಹುದೊಡ್ಡ ದಡ್ಡರು. ಅವರಿಗೆ ರೈತ ವರ್ಗ ಯಾವ ರೀತಿಯ ಸಂಕಷ್ಟದಲ್ಲಿದೆ ಎನ್ನುವುದೇ ಅರಿವಿಲ್ಲ. ಗೋಹತ್ಯೆ ನಿಷೇಧಿಸಿದರೆ ಮೊದಲು ಪೆಟ್ಟು ಬೀಳುವುದೇ ಶ್ರಮಿಕ ವರ್ಗಕ್ಕೆ. ಜತೆಗೆ, ಪಶುಸಂಗೋಪನೆ ಇಲ್ಲದಂತೆಯೇ ಆಗಲಿದೆ. ಹಾಗೇ, ಚರ್ಮ ಉದ್ಯಮವನ್ನೆ ಆವಲಂಬಿಸಿರುವ ದಲಿತ ಸಮುದಾಯ ಬೀದಿಗೆ ಬರಲಿದೆ. ಹೀಗೆ, ಹಲವು ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜಕೀಯ ಲಾಭಕ್ಕಾಗಿ ಮಾತ್ರ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಸರಕಾರ ಅಧಿಕಾರಕ್ಕೇರಿದ ಬೆನ್ನಲ್ಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಷ್ಕರಿಸಿ ಹಲವು ಕಲಂಗಳನ್ನು ಸೇರ್ಪಡಿಸಲಾಯಿತು. ಇದು ಮುಖ್ಯವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸೆ ನೀಡುವುದೇ ಆಗಿತ್ತು. ಅದರಲ್ಲೂ ಈ ಕಾಯ್ದೆಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ತು ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ದಾಳಿ ನಡೆಸುವ, ಪರಿಶೀಲನೆ ನಡೆಸುವ ಅವಕಾಶವೂ ಕಲ್ಪಿಸಲಾಗಿತ್ತು.ಇದು ಬಹುದೊಡ್ಡ ದುರಂತ ಹಾಗೂ ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದರು.

ಭೂಮಿಯ ಒಡೆತನ ಹಾಗೂ ನೇರವಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಕೃಷಿ ಕ್ಷೇತ್ರದ ಸರ್ವಸ್ವವನ್ನೂ ಕಾರ್ಪೊರೇಟ್ ಕಂಪೆನಿಗಳೇ ನಿಯಂತ್ರಿಸುತ್ತವೆ. ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಎಲ್ಲವೂ ಇಂದು ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ. ಅದರಲ್ಲೂ ಸುಮಾರು 25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಅವು ಸ್ವಾಭಾವಿಕ ಬೀಜಗಳಾಗಿದ್ದರಿಂದ ಸಹಜವಾಗಿಯೇ ಶಕ್ತಿಯುತವಾಗಿದ್ದವು. ಬೀಜಗಳ ಮರು ಉತ್ಪಾದನೆ ಹಾಗೂ ರೈತರ ನಡುವೆ ಬೀಜಗಳ ವಿನಿಮಯ ನಡೆಯುತ್ತಿತ್ತು.

ಆದರೆ ಇಂದು ವಾಣಿಜ್ಯ ಬೆಳೆಗಳ ಬಿತ್ತನೆ ಮಾತ್ರವಲ್ಲದೆ ಆಹಾರ ಬೆಳೆಗಳ ಬಿತ್ತನೆ ಬೀಜಗಳೂ ಸಹ ಕಾಪೆರ್Çರೇಟ್ ಕಂಪನಿಗಳ ಹಿಡಿತದಲ್ಲಿವೆ. ಬೀಜ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲಿಕ್ಕಾಗಿ ಈ ಲೂಟಿಕೋರ ಕಂಪನಿಗಳು ಬೀಜಗಳ ಮರು ಉತ್ಪಾದನೆಯ ಸಾಮಥ್ರ್ಯವನ್ನೇ ನಾಶಪಡಿಸಿದ್ದಾರೆ. ಹಾಗಾಗಿ ಪ್ರತಿ ಬಾರಿ ಬಿತ್ತನೆ ಮಾಡಬೇಕಾದಾಗಲೂ ರೈತರು ಅನಿವಾರ್ಯವಾಗಿ ಈ ಬಹುರಾಷ್ಟ್ರೀಯ ಕಂಪೆÀನಿಗಳ ಬೀಜಗಳನ್ನೆ ಅವಲಂಬಿಸಬೇಕಾದ ದುಸ್ಥಿತಿ ಉಂಟಾಗಿದೆ ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಬಿಜೆಪಿ ಸರಕಾರ, ಬಂಡವಾಳಶಾಹಿಗಳ ಪರವಾಗಿ ರೈತ ವಿರೋಧಿ ಕಾಯ್ದೆಗಳನ್ನು ತಂದು ದೇಶದ ಅನ್ನದಾತರಿಗೆ ಮರಣ ಶಾಸನ ಮಾಡಲು ಹೊರಟ್ಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರೋಧ ರೈತರ ಹೋರಾಟ ನಡೆಸಿದ್ದು ಇತಿಹಾಸದ ಪುಟ ಸೇರಿದೆ.ಇದು ಪ್ರಜಾಪ್ರಭುತ್ವದ ಬಹುದೊಡ್ಡ ಗೆಲುವು ಆಗಿದೆ. ಇಷ್ಟೊಂದು ಪರಿಣಾಮಕಾರಿ ಹೋರಾಟವೂ ಯಾವುದೇ ದೇಶದಲ್ಲಿ ನಡೆದಿಲ್ಲ ಎಂದು ಸಾಯಿನಾಥ್ ನುಡಿದರು.

ವಿಚಾರಸಂಕಿರಣದಲ್ಲಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡ್ಡಿ, ರೈತ ನಾಯಕರಾದ ಜಿ.ಸಿ.ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ಎನ್.ಎಲ್.ಭರತರಾಜು, ಪ್ರಾಂತ ರೈತ ಸಂಘ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News