ಅನರ್ಹ ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2023-09-08 13:59 GMT

ಬೆಂಗಳೂರು, ಸೆ.8: ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಸಂಸದ ಆಯ್ಕೆಯನ್ನು ಅಸಿಂಧು ಗೊಳಿಸಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವವರೆಗೂ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮುಂದಿನ ಸೋಮವಾರ ಅಥವಾ ಮಂಗಳವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ಅರ್ಜಿದಾರ ದೇವರಾಜೇಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಅಸಿಂಧು ಆದೇಶಕ್ಕೆ ತಡೆ ನೀಡಬಾರದು. ತಡೆ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಆದೇಶ ಹೊರಡಿಸಿದ ದಿನವೇ ತಡೆಗೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಅರ್ಜಿ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಅಸಿಂಧು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‍ಗೆ ಅವಕಾಶ ಇಲ್ಲ ಎಂದು ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅಸಿಂಧು ಆದೇಶ ಮಾಡಿದ ಮೇಲೆ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡಲು ಅವಕಾಶವಿದೆ. ಮೇಲ್ಮನವಿ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ ಇದೆ. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಲು ಜನಪ್ರತಿನಿಧಿಗಳ ಕಾಯ್ದೆಯಲ್ಲಿಯೇ ಅವಕಾಶ ಇದೆ ಎಂದು ಮೌಖಿಕವಾಗಿ ತಿಳಿಸಿದರು.

ಮತ್ತೊಬ್ಬ ಅರ್ಜಿದಾರ ಎ.ಮಂಜು ಪರ ವಕೀಲರು, ಪ್ರಜ್ವಲ್ ಅವರ ಮಧ್ಯಂತರ ಅರ್ಜಿಗೆ ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು. ಈ ಬಗ್ಗೆ ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News