ಶಮಿಯ ಹೆಸರನ್ನೇ ಉಲ್ಲೇಖಿಸದೆ ಕೊಹ್ಲಿ, ಅಯ್ಯರ್‌ಗೆ ಅಭಿನಂದಿಸಿದ ಪ್ರಹ್ಲಾದ್‌ ಜೋಶಿ: ಜನರಿಂದ ಛೀಮಾರಿ

Update: 2023-11-16 07:09 GMT

ಮುಹಮ್ಮದ್‌ ಶಮಿ / ಪ್ರಹ್ಲಾದ್‌ ಜೋಶಿ (Photo: PTI)

ಹೊಸದಿಲ್ಲಿ: ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಭಾರತ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ.

398 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಝಿಲ್ಯಾಂಡ್ ತಂಡಕ್ಕೆ ಆಘಾತ ನೀಡಿದ್ದ ಬೌಲರ್‌ ಮುಹಮ್ಮದ್‌ ಶಮಿ ಅವರು ಭರ್ಜರಿ ಏಳು ವಿಕೆಟ್ ಪಡೆಯುವ ಮೂಲಕ ಟೀಮ್‌ ಇಂಡಿಯಾದ ಗೆಲುವಿನ ರೂವಾರಿಯಾದರು. ಅದರೂ , ಶಮಿಯ ಮುಖ್ಯ ಕೊಡುಗೆಯನ್ನು ಕಡೆಗಣಿಸಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಹೆಸರನ್ನು ಮಾತ್ರ ಉಲ್ಲೇಖಿಸಿ ಅಭಿನಂದಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

“ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಅವರಿಗೆ ಅಭಿನಂದನೆಗಳು. ಫೈನಲ್ ಪಂದ್ಯದಲ್ಲೂ ಗೆಲುವು ನಿಮ್ಮದಾಗಲಿ, ಅಂದರೆ ನಮ್ಮೆಲ್ಲರದ್ದಾಗಲಿ” ಎಂದು ಜೋಶಿ ಟ್ವೀಟ್‌ ಮಾಡಿದ್ದಾರೆ.

ಸೆಮಿಫೈನಲ್‌ ನಲ್ಲಿ ಪ್ರಬಲ ನ್ಯೂಝಿಲ್ಯಾಂಡ್ ತಂಡದೆದುರು 7 ವಿಕೆಟ್‌ ಗಳಿಸಿ ದಾಖಲೆ ನಿರ್ಮಿಸಿ, ಪಂದ್ಯದ ಗೆಲುವಿಗೆ ಮುಖ್ಯ ಕಾರಣವಾಗಿದ್ದರೂ ಶಮಿಯ ಹೆಸರನ್ನು ಉಲ್ಲೇಖಿಸದ ಕೇಂದ್ರ ಸಚಿವರ ನಿಲುವಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಈ ಕುರಿತು ಹಿರಿಯ ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಕೂಡಾ ಅಸಮಾಧಾನ ವ್ಯಕ್ತಪಡಿಸಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದಾರೆ.

“ನಿನ್ನೆಯ ಕ್ರಿಕೆಟ್ ಆಟದಲ್ಲಿ ಮಹಮ್ಮದ್ ಶಾಮಿ ಅವರು ವಿಲಿಯಮ್ಸನ್ ಮತ್ತು ಮಿಚೆಲ್ ಅವರನ್ನು ಆಟದ ನಿರ್ಣಾಯಕ ಹಂತದಲ್ಲಿ ಪೆವಿಲಿಯನ್ ಗೆ ಕಳಿಸದೇ ಇದ್ದಿದ್ದರೆ ಭಾರತದ ಗೆಲುವು ಕಷ್ಟವಿತ್ತು. ಇವರಿಬ್ಬರೂ ಔಟಾದಾಗ ನಮ್ಮ ಆಟಗಾರರ ಕಳೆಗುಂದಿದ್ದ ಮುಖದಲ್ಲಿ ಹೇಗೆ ಮತ್ತೆ ಉತ್ಸಾಹ ಮೂಡಿತು ಎಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಏಳು ವಿಕೆಟ್ ತಗೊಂಡ ಶಮಿ ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು. ಅದನ್ನು ನಮ್ಮ ಶತಕವೀರರಾದ‌ ಕೊಹ್ಲಿ ಮತ್ತು ಅಯ್ಯರ್ ಸೇರಿದಂತೆ ಇಡೀ ಟೀಂ ಸಂಭ್ರಮಿಸಿತು ಕೂಡಾ. ಇದ್ಯಾವುದೂ ಶ್ರೀ ಪ್ರಹ್ಲಾದ ಜೋಷಿಯವರಿಗೆ ಅರ್ಥವಾಗಲೇ ಇಲ್ಲ. ಇಂಥವರೇ ನಮ್ಮ ನಾಡಿನ ಇತಿಹಾಸವನ್ನು ಹೀಗೆಯೇ ಬರೆದದ್ದು ಮತ್ತು ಬರೆಯ ಬಯಸುವುದು ಎಂಬುದನ್ನು ಮರೆಯದಿರೋಣ” ಎಂದು ಬಿಳಿಮಲೆ ಅವರು ಬರೆದಿದ್ದಾರೆ.

ಶಮಿ ಅವರು ಈ ವಿಶ್ವಕಪ್‌ ಸರಣಿಯಲ್ಲಿ ಹೆಚ್ಚು ವಿಕೆಟ್‌ ಪಡೆಯದಿದ್ದರೆ ಟೀಮ್‌ ಇಂಡಿಯಾ ಫೈನಲ್‌ಗೆ ಬರುತ್ತಿರಲಿಲ್ಲ, ನಿಮಗೆ ಈ ಟ್ವೀಟ್‌ ಮಾಡಲು ಆಗುತ್ತಿರಲಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

ನೆಟ್ಟಿಗರಿಂದ ಟೀಕೆಗಳು ಬರುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಕನ್ನಡದಲ್ಲಿ ಹಾಕಲಾಗಿದ್ದ ಪೋಸ್ಟ್‌ ಅನ್ನು ತಿದ್ದಿ ಶಮಿ ಹೆಸರನ್ನು ಜೋಷಿ ಅವರು ಹಾಕಿಸಿದ್ದಾರೆ. ಅದಾಗ್ಯೂ, ಅವರ ಟ್ವೀಟ್‌ ಮತ್ತು ಇಂಗ್ಲಿಷ್‌ನಲ್ಲಿ ಬರೆದ ಅಭಿನಂದನಾ ಸಂದೇಶದಲ್ಲಿ ಶಮಿ ಹೆಸರು ಉಲ್ಲೇಖಿಸದೆ ಅಯ್ಯರ್‌ ಹಾಗೂ ಕೊಹ್ಲಿಯನ್ನು ಉಲ್ಲೇಖಿಸಲಾಗಿದೆ.

“ಯಾಕ್ರೀ ಜೋಶಿಯವರಾ ಸಾಬರ ಶಮಿ ಆಟ ಇಷ್ಟ ಆಗಲಿಲ್ಲೆನ್ ನಿಮಗ? ಎಷ್ಟ್ ತಾರತಮ್ಯ ಪಕ್ಷಪಾತ ಮಾಡ್ತೀರಿ ರೀ? ಸಾಮಾಜಿಕವಾಗಿ ದಲಿತರನ್ನ ಮಾಡ್ತಿದ್ರಿ ಈಗ ದೇಶದ ತಂಡವನ್ನ ಫೈನಲ್ ಗೆ ಕಳಿಸಿದ ಮುಸ್ಲಿಮನನ್ನ ಅವಮಾನ ಮಾಡಕತ್ತೀರಿ .... ನೀವು ಏನಾದರೆನ್ ನಿಮ್ಮ ಪಕ್ಷಪಾತ ನೀತಿ ಬಿಡಲ್ಲ ಅಂತ ಇದರಿಂದ ಸಾಬೀತಾಗಿದೆ ಬಿಡಿ.” ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ.

ಕೋಮುವಾದಿ ರಾಜಕಾರಣ ಮಾಡುತ್ತಾ ಬಂದಿರುವ ಜೋಷಿಗೆ ಮುಸ್ಲಿಂ ಆಟಗಾರ ಭಾರತ ತಂಡದ ಗೆಲುವಿಗೆ ಕಾರಣವಾಗಿರುವುದು ಸಹಿಸಲು ಆಗುತ್ತಿಲ್ಲ ಎಂದು ದೂರಿದ ನೆಟ್ಟಿಗರು, ದೇಶಕ್ಕಾಗಿ ಆಡುವ ಆಟಗಾರರಲ್ಲೂ ಧರ್ಮ ತಾರತಮ್ಯ ಮಾಡುತ್ತಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.

Full View

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News