ಪ್ರವೀಣ್ ನೆಟ್ಟಾರು-ಪರೇಶ್ ಮೇಸ್ತ ಪ್ರಕರಣ: ಸದನದಲ್ಲಿ ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಶಾಸಕ

Update: 2023-07-05 14:39 GMT

ಬೆಂಗಳೂರು, ಜು.5: ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು, ಹರ್ಷ ಕೊಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೆಸ್ತ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯ ಬೇಳೂರು ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು.

ಬುಧವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅನುಮೋದಿಸಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹಾಗೂ ಹರ್ಷ ಕೊಲೆ ಪ್ರಕರಣವನ್ನು ಬಿಜೆಪಿಯವರು ಒಂದು ರಾಜಕೀಯ ಪಕ್ಷ ಹಾಗೂ ಒಂದು ಸಮುದಾಯದ ಮೇಲೆ ಹೇರಲು ಪ್ರಯತ್ನಿಸಿದರು ಎಂದರು.

ಯಾರೊಬ್ಬರೂ ಕೊಲೆಗೆ ಪ್ರಚೋದನೆ ನೀಡುವುದಿಲ್ಲ. ಇಂತಹ ಘಟನೆಗಳು ಜರುಗಿದಾಗ ಕಾನೂನು ರೀತಿ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ಪರೇಶ್ ಮೇಸ್ತ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿದ ಕಾರಣ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಐದಾರು ಜಿಲ್ಲೆಗಳಲ್ಲಿ ಹಿನ್ನಡೆಯಾಯಿತು. ಆದರೆ, ಈಗ ಸಿಬಿಐ ತನಿಖೆಯಲ್ಲಿ ಅದು ಕೊಲೆ ಅಲ್ಲ, ಸಹಜ ಸಾವು ಎಂದು ವರದಿ ಬಂದಿದೆ ಎಂದು ಅವರು ಹೇಳಿದರು.

ನಾವು ಹಿಂದುಗಳಲ್ಲವೇ? ಯಾರೇ ಯಾರನ್ನು ಸಾಯಿಸಿದೂ ಅವರ ವಿರುದ್ಧ ಕ್ರಮ ಆಗಬೇಕು. ಕಾಂಗ್ರೆಸ್ ನವರು ಕೊಲೆ ಮಾಡಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ. ಹರ್ಷ ಕೊಲೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಸುಮಾರು 60 ದಿನ ನಿಷೇಧಾಜ್ಞೆ ಇತ್ತು. ಇದರಿಂದ ಜನರು ಸಂಕಷ್ಟಕ್ಕೆ ಒಳಗಾದರು. ಕೊಲೆ ಯಾರೇ ಮಾಡಿರಲಿ, ಅದು ಮುಸ್ಲಿಮ್, ಕ್ರಿಶ್ಚಿಯನ್, ಹಿಂದೂ ಯಾರೇ ಇದ್ದರೂ ಕ್ರಮ ಆಗಲಿ. ನಿಮ್ಮ ಸರಕಾರ ಇತ್ತು, ಕೊಲೆಗಡುಕರಿಗೆ ಯಾಕೆ ಶಿಕ್ಷೆ ಕೊಡಲಿಲ್ಲ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ, ಹರ್ಷ ಕೊಲೆಯಾದ ಸಂದರ್ಭದಲ್ಲಿ ನಾನೆ ಗೃಹ ಸಚಿವನಾಗಿದ್ದೆ. ಈ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಹೆಸರನ್ನು ನಾವು ಯಾರು ಉಲ್ಲೇಖ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News