ರಾಮ ಮಂದಿರ ನಿರ್ಮಾಣ ಒಳ್ಳೆಯದೇ; ಎಲ್ಲರನ್ನೂ ಸಮಾನತೆಯಿಂದ ಕಾಣುವ ರಾಮ ರಾಜ್ಯ ನಿರ್ಮಾಣ ಯಾವಾಗ?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2023-12-27 11:53 GMT

ಪ್ರಿಯಾಂಕ್ ಖರ್ಗೆ

ಬಾಗಲಕೋಟೆ: ರಾಮ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯದೇ. ಆದರೆ ಎಲ್ಲರನ್ನೂ ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಕಾಣುವ ರಾಮ ರಾಜ್ಯ ಯಾವಾಗ ನಿರ್ಮಾಣವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಿರುದ್ಯೋಗ ರಹಿತ, ಆರ್ಥಿಕ ಸಬಲತೆಯ ಆಡಳಿತದ ಜನರ‌ ನಿರೀಕ್ಷೆ‌ ಹುಸಿಯಾಗಿದೆ ಎಂದು ಕೇಂದ್ರದ ವಿರು‍ದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೆಯುತ್ತಿತ್ತು. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಕಾಗೇರಿ ನಾನು RSS ನವರು ಎಂದು ಹೇಳಿದ್ದರು. ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್,ಬೈಬಲ್ ಮೇಲೆ ಅಲ್ಲ. ಯಾರು ಏನು ಬೇಕಾದರು ಹೇಳಲಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಸಂವಿಧಾನದ ಸರ್ಕಾರ. ಬಸವ ತತ್ವ,ಅಂಬೇಡ್ಕರ್ ತತ್ವ ಮೇಲೆ ಸರ್ಕಾರ ನಡೀತಿದೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ನಡೆದ 40 ಸಾವಿರ ಕೋಟಿ ಹಗರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಾಖಲೆ ಬಿಡುಗಡೆ ಮಾಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

"40% ಕಮಿಷನ್ ಸರಕಾರ ಎಂದು ಆರೋಪ ಮಾಡಿದಾಗ ಸುಳ್ಳು ಎಂದು ಹೇಳಿದ್ದ ಬಿಜೆಪಿ ನಾಯಕರಗಳು ಈಗ ಎಲ್ಲಿದ್ದಾರೆ ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಈಗ ರಾಜ್ಯದ ಜನತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಬೇಕು" ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

“ನಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಕೊಡಲಿ. ಬೇಕಾದರೆ ಪಕ್ಷದಿಂದ ಹೊರಗೆ ಹಾಕಲಿ ನೋಡೋಣ. ಆಗ ಇವರೆಲ್ಲರ ಬಣ್ಣ ಕಳಚುತ್ತೇನೆ” ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ಈಗ ಬಹಿರಂಗವಾಗಿ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತನಿಖೆ ನಡೆಸುತ್ತಿರುವ ಆಯೋಗಕ್ಕಾದರೂ ದಾಖಲೆಗಳನ್ನು ನೀಡಬೇಕು. ಕೋವಿಡ್ ಸಮಯದಲ್ಲಿ ನಡೆದ ಅಕ್ರಮಗಳ ಬಗ್ಗೆ ಈಗಾಗಲೇ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಲಜೀವನ್ ಮಷಿನ್ ನಲ್ಲಿ ನಡೆದಿರು ಅಕ್ರಮಗಳ ತನಿಖೆಯು ನಡೆಯುತ್ತಿದೆ. ಇನ್ನು ನಾಲ್ಕು ತಿಂಗಳಲ್ಲಿ ತನಿಖೆಯ ವರದಿಗಳು ಸಿಗುವ ಸಾದ್ಯತೆ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News