ಪಾಕಿಸ್ತಾನ ಪರ ಘೋಷಣೆ ಆರೋಪ: ಎಫ್‍ಎಸ್‍ಎಲ್ ವರದಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದ ಡಾ.ಜಿ. ಪರಮೇಶ್ವರ್
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಸಂಬಂಧ ಎಫ್‍ಎಸ್‍ಎಲ್‍ನ ವೈಜ್ಞಾನಿಕ ವರದಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಎಸ್‍ಎಲ್‍ನ ವೈಜ್ಞಾನಿಕ ವರದಿಗಾಗಿ ಕಾಯುತ್ತಿದ್ದು, ಸಂಪೂರ್ಣ ವರದಿ ಬಂದ ನಂತರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಮುಲಾಜಿಲ್ಲದೇ, ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಮಾತನ್ನು ಸದನದಲ್ಲಿಯೂ ಹೇಳಿದ್ದೇನೆ ಎಂದು ವಿವರಣೆ ನೀಡಿದರು.
ಎಫ್‍ಎಸ್‍ಎಲ್ ವರದಿ ಸ್ಪಷ್ಟಿಕರಣ ಪ್ರಶ್ನೆ ಬರುವುದಿಲ್ಲ. ಒಮ್ಮೆ ವರದಿ ಬಂದರೆ ಮುಗಿಯಿತು. ಎರಡನೆ ವರದಿ, ಮೂರನೇ ವರದಿ ಕೊಡುವಂತೆ ನಾವು ಹೇಳಲು ಹೋಗುವುದಿಲ್ಲ. ವರದಿ ಮುಚ್ಚಿಡುವ ಅಗತ್ಯವೇ ಇಲ್ಲ. ಬಿಜೆಪಿಯವರು ಆರೋಪ ಮಾಡಿಕೊಳ್ಳಲಿ, ನಾವು ಉತ್ತರ ನೀಡುತ್ತೇವೆ. ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ, ವರದಿ ಕೈ ಸೇರಿದ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ನುಡಿದರು.
ಇನ್ನೂ, ಬಿಜೆಪಿಯರು ಅವರ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ನಾನು ಹೇಳಿದರೆ ಸುಮ್ಮನೆ ರಾಜಕೀಯ ಆಗುತ್ತೆ. ಮಂಗಳೂರಲ್ಲಿ ಕುಕ್ಕರ್ ಸ್ಫೋಟ ಆದಾಗ ಯಾರು ಅಧಿಕಾರದಲ್ಲಿದ್ದರು? 2008ರಲ್ಲಿ ಸರಣಿ ಸ್ಫೋಟ ಆಗಿತ್ತು. ಆಗ ಯಾರ ಸರಕಾರವಿತ್ತು ಎಂದು ಪ್ರಶ್ನಿಸಿದ ಅವರು, ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಲು ಯಾರೂ ಮುಂದಾಗಬಾರದು ಎಂದು ಹೇಳಿದರು.