ರಾಜ್ಯ ಸರಕಾರದ ವಿರುದ್ಧ ನಾಳೆ(ಜ.29) ಕೋಲಾರದಲ್ಲಿ ಪ್ರತಿಭಟನೆ: ಆರ್.ಅಶೋಕ್

Update: 2024-01-28 12:20 GMT

ಬೆಂಗಳೂರು: ‘ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ’ ಎಂಬ ಘೋಷಣೆಯೊಂದಿಗೆ ಕೋಲಾರದಲ್ಲಿ ನಾಳೆ (ಜ.29) ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.

ರವಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿ ಅಧಿವೇಶನಕ್ಕೂ ಮುನ್ನ ರೈತರಿಗೆ ಬರ ಪರಿಹಾರ ಘೋಷಿಸಿದ್ದರು. ಇಷ್ಟು ಬಜೆಟ್‍ಗಳನ್ನು ಮಂಡನೆ ಮಾಡಿದ ಇವರು ಜನರಿಗೆ ಟೋಪಿ ಹಾಕುವುದು ಹೇಗೆಂದು ಕಲಿತಿದ್ದಾರೆ ಎಂದು ಟೀಕಿಸಿದರು.

ರೈತರು ಕಣ್ಣೀರು ಹಾಕುತ್ತಿರುವಾಗ ಮುಲ್ಲಾಗಳಿಗೆ 10ಸಾವಿರ ಕೋಟಿ ರೂ.ನೀಡುತ್ತೇನೆಂದು ಹೇಳಿ 1ಸಾವಿರ ಕೋಟಿ ರೂ. ಬಿಡುಗಡೆ ಮಾಡಿಬಿಟ್ಟರು. ಆದರೆ ರೈತರಿಗೆ 105 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಆದುದರಿಂದ, ಸೋಮವಾರ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಹೇಳಿದರು.

ವಿದ್ಯುತ್ ಕಡಿತ, ಕಾಮಗಾರಿ ಸ್ಥಗಿತ ವಿರುದ್ಧ ಜ.30ರಂದು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟಿಸಲಾಗುವುದು. ಕಾಫಿ ಬೆಳೆಗಾರರು ನಡೆಸಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ. ಪ್ರತಿಜಿಲ್ಲೆಗಳಲ್ಲಿ ನಾನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಿದ್ದೇವೆ ಎಂದು ಅಶೋಕ್ ತಿಳಿಸಿದರು.

ಏಳು ಗಂಟೆ ವಿದ್ಯುತ್ ಎಂದು ಹೇಳಿ ಮೂರು ಗಂಟೆ ನೀಡುತ್ತಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್‍ಪ್ಲೆಸ್ ನೀರು, ವಿದ್ಯುತ್ ನೀಡುತ್ತಿದ್ದರೆ, ಕಾಂಗ್ರೆಸ್ ಸರಕಾರದಲ್ಲಿ ಹೋಪ್‍ಲೆಸ್, ಹೆಲ್ಪ್ ಲೆಸ್ ಆಗಿದೆ. ಈಗ ಸರಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ ಎಂದು ಅವರು ಟೀಕಿಸಿದರು.

ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನ ನೀಡಿ, ಮೆಡಿಕಲ್ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೇಮಿಸಿ ಉಡಾಫೆಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ದುಂದುವೆಚ್ಚ ಮಾಡಲು, ಮಜಾ ಮಾಡಲು ಹಣ ಇದ್ದರೂ ರೈತರು, ವೈದ್ಯರು, ಅಂಗನವಾಡಿ ನೌಕರರಿಗೆ ನೀಡಲು ಹಣವಿಲ್ಲ, ಕಾಮಗಾರಿಗಳು ಸ್ಥಗಿತವಾಗಿದೆ. ಸರಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದಾಗ ಮೂರು ರಾಜ್ಯಗಳು ಹೋಯಿತು. ಈಗ ಯಾತ್ರೆ ಮಾಡಿದಾಗ ನಿತೀಶ್ ಕುಮಾರ್ ಕಾಂಗ್ರೆಸ್ ಚೋಡೋ ಎಂದಿದ್ದಾರೆ. ಆಮ್ ಆದ್ಮಿ ಪಕ್ಷದವರೂ ಅದನ್ನು ಹೇಳಿದ್ದಾರೆ. ಇವರು ಕಾಲಿಟ್ಟಲೆಲ್ಲ ಸರಕಾರ ಬೀಳುತ್ತದೆ. ಇವರಿನ್ನೂ ಮುಂದಕ್ಕೆ ಬಂದು ಕಾಂಗ್ರೆಸ್‍ನ ಸರಕಾರಗಳನ್ನು ಬೀಳಿಸಲಿ ಎಂದು ಅವರು ವ್ಯಂಗ್ಯವಾಡಿದರು.

ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದು ಕಾಂಗ್ರೆಸ್ ಸಚಿವರೇ ಸಹಿ ಹಾಕಿದ್ದಾರೆ. ಸಿದ್ದರಾಮಯ್ಯನವರು ಆಗಲೇ ರಾಜೀನಾಮೆ ನೀಡಬೇಕಿತ್ತು. ಇನ್ನು ವರದಿ ಜಾರಿ ಮಾಡಿದರೆ ಅದು ಯಾವ ನ್ಯಾಯ ಎಂದು ಅಶೋಕ್ ಪ್ರಶ್ನಿಸಿದರು.

ಹನುಮ ಧ್ವಜ ಹಾರಿಸಲು ಆಗ್ರಹ: ಮಂಡ್ಯದಲ್ಲಿ ಹನುಮ ಧ್ವಜವನ್ನು ಕಾಂಗ್ರೆಸ್‍ನವರು ಧ್ವಂಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್ ಶಿವನ ಪುತ್ರ ಎಂದರು. ಏಕಾಏಕಿ ಪೊಲೀಸರನ್ನು ಕರೆಸಿ ಧ್ವಜ ಏಕೆ ತೆಗೆಸಬೇಕಿತ್ತು? ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲೇ ಮರಳಿ ಧ್ವಜ ಹಾರಿಸಬೇಕು ಎಂದು ಅಶೋಕ್ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News